

ಜಗಳೂರು: ಓಝೋನ್ ಪದರವು ಭೂಮಿಯ ಸಂರಕ್ಷಣಾ ಕವಚ. ಆದರೆ, ಸದ್ಯ ಮಾನವ ನಿರ್ಮಿತ ತಪ್ಪುಗಳಿಂದಾಗಿ ತನ್ನ ಸಾಮರ್ಥ್ಯ ಕಳೆದುಕೊಳ್ಳುತ್ತಿದೆ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಕಳವಳ ವ್ಯಕ್ತಪಡಿಸಿದರು.
ಇಲ್ಲಿನ ಸಂತೆ ಮೈದಾನದಲ್ಲಿ ಭಾನುವಾರ ಪಪಂ, ಸ್ವಚ್ಛ ಭಾರತ್ ಮಿಷನ್, ಇಂಡಿಯನ್ ಸ್ವಚ್ಛತಾ ಲೀಗ್ ಸೀಸನ್-02 ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಓಝೋನ್ ದಿನ ಮತ್ತು ತ್ಯಾಜ್ಯ ವಿಂಗಡಣೆ ಅಭಿಯಾನ ಹಾಗೂ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ಮಾತನಾಡಿದರು.
ಭೂಮಿಯ ವಾತಾವರಣದಲ್ಲಿರುವ ಓಝೋನ್ ಪದರವು ಸೂರ್ಯನ ಹಾನಿಕಾರಕ ನೇರಳಾತೀತ ಕಿರಣಗಳಿಂದ ಪೃಥ್ವಿಯನ್ನು ರಕ್ಷಿಸುತ್ತದೆ. ಮಾನವನ ದುರಾಸೆಯಿಂದ ಓಝೋನ್ ಪದರಕ್ಕೆ ಹಾನಿಯಾಗುತ್ತಿದ್ದು, ಅದರ ರಕ್ಷಣೆಗೆ ಸ್ವಚ್ಛತೆ ಕಾಪಾಡಿ, ಎಸಿ, ರೆಫ್ರಿಜೇಟರ್ ಮಿತವಾಗಿ ಬಳಸಿ ಎಂದು ಸಲಹೆ ನೀಡಿದರು.
ಮಕ್ಕಳಲ್ಲಿ ಓಝೋನ್ ಪದರ ರಕ್ಷಣೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಗಳೂರು ತಾಲೂಕಿನಲ್ಲಿ ಪ್ರಾಥಮಿಕ, ಪ್ರೌಢ, ಪಿಯು ಮತ್ತು ಪದವಿ ವಿದ್ಯಾರ್ಥಿಗಳಿಗೆ ಶೀಘ್ರವೇ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.
ಎನ್‌ಎಂಕೆ ಶಾಲೆ ಕಾರ್ಯದರ್ಶಿ ಲೋಕೇಶ್ ಮಾತನಾಡಿ, ಓಝೋನ್ ಪದರದ ಸವಕಳಿಗೆ ಮಾಲಿನ್ಯವನ್ನು ಅತಿ ದೊಡ್ಡ ಕಾರಣವೆಂದು ಪರಿಗಣಿಸಲಾಗಿದೆ. ಭೂಮಿಯ ಸುತ್ತ ರಕ್ಷಣಾತ್ಮಕ ಪದರಕ್ಕೆ ವಿವಿಧ ಅಪಾಯಕಾರಿ ಅನಿಲಗಳಿಂದ ಭೂಮಿಯನ್ನು ರಕ್ಷಿಸಲು ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದರು.
ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕಾ, ಪಪಂ ಸದಸ್ಯ ರಮೇಶ್‌ರೆಡ್ಡಿ, ಲುಕ್ಮಾನ್‌ವುಲ್ಲಾ ಖಾನ್, ಕರವೇ ಅಧ್ಯಕ್ಷ ಮಹಾಂತೇಶ್, ಅರಿಶಿಣಗುಂಡಿ ಮಂಜುನಾಥ್, ರವಿಕುಮಾರ್, ಸಣ್ಣ ತಾನಾಜಿ ಗೋಸಾಯಿ, ಶಾಂತಪ್ಪ, ಕುರಿ ಜಯಣ್ಣ, ಉಪನ್ಯಾಸಕ ಎನ್.ಟಿ. ತಿಪ್ಪೇಸ್ವಾಮಿ ಮತ್ತಿತರರಿದ್ದರು.