

ಕುಷ್ಟಗಿ: ಅಂಗಡಿಗೆ ಬರುವ ಗ್ರಾಹಕರ ವಿವಿಧ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡುವುದು ಹಾಗೂ ಅಂಗಡಿಗಳ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಪಟ್ಟಣದ ವಿವಿಧ ಅಂಗಡಿಕಾರರಿಗೆ ಪೊಲೀಸರು ಭಾನುವಾರ ತಾಕೀತು ಮಾಡಿದರು.
ಮೊದಲ ಹಂತವಾಗಿ ಪಟ್ಟಣದ ಬಸ್ ನಿಲ್ದಾಣ ರಸ್ತೆಯ ಎರಡೂ ಬದಿಯ ಅಂಗಡಿಕಾರರಿಗೆ ತಾಕೀತು ಮಾಡಲಾಯಿತು. ಸಿಪಿಐ ಎನ್.ಆರ್. ನಿಂಗಪ್ಪ ಹಾಗೂ ಪಿಎಸ್‌ಐ ತಿಮ್ಮಣ್ಣ ಸ್ವತಃ ಪ್ರತಿ ಅಂಗಡಿಗಳಿಗೆ ತೆರಳಿ ಸೂಚನೆ ನೀಡಿದರು.
ಅಂಗಡಿಗಳನ್ನು ರಸ್ತೆ ವರೆಗೆ ಅತಿಕ್ರಮಿಸಿರುವುದರಿಂದ ಬೈಕ್ ಸೇರಿ ವಿವಿಧ ವಾಹನಗಳು ರಸ್ತೆ ಮಧ್ಯೆ ನಿಲ್ಲುತ್ತಿವೆ. ಇದರಿಂದ ಸಂಚಾರ ಅಸ್ತವ್ಯಸ್ತಗೊಳ್ಳುತ್ತಿದೆ. ಅಂಗಡಿಗಳ ಮುಂದಿನ ಜಾಗದಲ್ಲಿಯೇ ಮರಮ್ ಹಾಕಿ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಬೇಕು. ಜತೆಗೆ ಪ್ರತಿ ಅಂಗಡಿಕಾರರು ಪ್ರತ್ಯೇಕ ಬ್ಯಾರೆಲ್, ಡಬ್ಬಿ ಇಟ್ಟು ಕಸ ಸಂಗ್ರಹಿಸಿಡಬೇಕು. ಸ್ವಚ್ಛತೆ ಕಾಪಾಡದಿದ್ದರೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮೊದಲ ಹಂತವಾಗಿ ಬಸ್ ನಿಲ್ದಾಣ ರಸ್ತೆಯ ಎರಡೂ ಬದಿಯ ವ್ಯಾಪಾರಿಗಳಿಗೆ ತಿಳಿ ಹೇಳಲಾಗಿದೆ. ಬಳಿಕ ಗಜೇಂದ್ರಗಡ ರಸ್ತೆ ಹಾಗೂ ಉಳಿದ ರಸ್ತೆ ಪಕ್ಕದ ಅಂಗಡಿಕಾರರಿಗೆ ಸೂಚನೆ ನೀಡಲಾಗುವುದು. ಒಂದು ವಾರದಲ್ಲಿ ಪಾರ್ಕಿಂಗ್ ಹಾಗೂ ಕಸ ಸಂಗ್ರಹಕ್ಕೆ ವ್ಯವಸ್ಥೆ ಮಾಡಿಕೊಳ್ಳದಿದ್ದಲ್ಲಿ ನೋಟಿಸ್ ನೀಡಿ ಕ್ರಮ ಕೈಗೊಳ್ಳಲಾಗುವುದು.| ಎನ್.ಆರ್.ನಿಂಗಪ್ಪ ಸಿಪಿಐ ಕುಷ್ಟಗಿ