ಜಲಮೂಲಗಳ ಸ್ವಚ್ಛತೆಗೆ ಆದ್ಯತೆ

Cleanliness of water bodies
Published on

ಗಜೇಂದ್ರಗಡ: ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಯ ಆದೇಶದ ಮೇರೆಗೆ ತಾಲೂಕಿನ 13 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾನುವಾರ ಕುಡಿಯುವ ನೀರಿನ ಜಲಮೂಲಗಳ ಸಂರಕ್ಷಣೆ ಹಾಗೂ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.

ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಜಲಾಗಾರಗಳ ಸ್ವಚ್ಛತೆ, ಪೈಪ್‌ಲೈನ್ ಸೋರಿಕೆ ತಡೆಗಟ್ಟುವಿಕೆ, ಕಲುಷಿತ ನೀರು ಕುಡಿಯುವ ನೀರಿಗೆ ಸೇರದಂತೆ ತಡೆಯುವ ಕೆಲಸ ಹಾಗೂ ಜಲಮೂಲಗಳ ಸುತ್ತಲಿನ ಪರಿಸರ ಸ್ವಚ್ಛಗೊಳಿಸುವ ಕಾರ್ಯ ನಡೆಯಿತು. ಜಲಾಗಾರಗಳು, ಟ್ಯಾಂಕ್‌ಗಳನ್ನು ಒಳಗಡೆಯಿಂದಲೂ ಶುಚಿಗೊಳಿಸಿ ಸುಣ್ಣ ಹಚ್ಚಲಾಯಿತು. ಅಲ್ಲದೆ, ನೀರು ಕುಡಿಯಲು ಯೋಗ್ಯವೇ, ಇಲ್ಲವೇ ಎಂಬುದನ್ನು ಪರೀಕ್ಷೆ ಮಾಡಲಾಯಿತು.

ತಾಲೂಕಿನ ರಾಂಪೂರು ಗ್ರಾಮ ಪಂಚಾಯಿತಿ, ಚಿಲಝರಿ, ಶಾಂತಗೇರಿ, ಗುಳಗುಳಿ, ಕುಂಟೋಜಿ, ಮುಶಿಗೇರಿ, ಲಕ್ಕಲಕಟ್ಟಿ, ಗೋಗೇರಿ, ಹಾಲಕೇರಿ ಸೇರಿದಂತೆ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಭಾನುವಾರ ಜಲಮೂಲಗಳ ಸ್ವಚ್ಛಗೊಳಿಸಲಾಯಿತು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಸವರಾಜ ಬಡಿಗೇರ ಅವರು ನಿಡಗುಂದಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಹೊಳೆ, ಬೋರ್‌ವೆಲ್ ನೀರು ಸಂಗ್ರಹಿಸಿ ಫ್ಲೋರೈಡ್ ಬಗ್ಗೆ ಎಫ್‌ಕೆಟಿ ಪರೀಕ್ಷೆ ಮಾಡಿದರು.

ಮಳೆಗಾಲ ಪ್ರಾರಂಭವಾಗಿದ್ದು, ಕುಡಿಯುವ ನೀರಿಗೆ ಕಲುಷಿತ ನೀರು ಸಂಗ್ರಹವಾಗದಂತೆ ಮತ್ತು ಜಲಮೂಲಗಳ ಸುತ್ತ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿಯೂ ಸ್ವಚ್ಛತೆಗೂ ಆದ್ಯತೆ ನೀಡಲಾಗಿದೆ. I ಬಸವರಾಜ ಬಡಿಗೇರಿ, ಇಒ ತಾಪಂ ಗಜೇಂದ್ರಗಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net