ಬೇಲೂರು ವಿಷ್ಣು ಸಮುದ್ರ ಕೆರೆ ಏರಿ ಸ್ವಚ್ಛತೆ

IMG_20241029_174808
ಬೇಲೂರು ಸಮೀಪದ ಬಿಷ್ಟಮ್ಮನವರ ಕೆರೆ ಏರಿ ಮೇಲೆ ಸ್ವಚ್ಛತೆಯಲ್ಲಿ ತೊಡಗಿರುವ ಸಿಬ್ಬಂದಿಯೊಂದಿಗೆ ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಇದ್ದರು.
Published on

ಬೇಲೂರು: ಬಿಷ್ಟಮ್ಮನವರ ಜಾತ್ರಾ ಮಹೋತ್ಸವ ಅಂಗವಾಗಿ ಪಟ್ಟಣದ ವಿಷ್ಣು ಸಮುದ್ರ ಕೆರೆ ಏರಿಯ ಎರಡು ಬದಿಯಲ್ಲೂ ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ನೇತೃತ್ವದಲ್ಲಿ ಸಿಬ್ಬಂದಿ ಮಂಗಳವಾರ ಸ್ವಚ್ಛಗೊಳಿಸಿದರು.

ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಮಾತನಾಡಿ, ಮುಂದಿನ ಕೆಲ ದಿನಗಳಲ್ಲೇ ಬಿಷ್ಟಮ್ಮನವರ ಜಾತ್ರಾ ಮಹೋತ್ಸವ ಆರಂಭವಾಗುವುದರಿಂದ ವಿವಿಧ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ರಸ್ತೆ ಪಕ್ಕದಲ್ಲಿ ಮತ್ತು ದೇವರ ಗದ್ದುಗೆ ಆವರಣ, ಅಕ್ಕ ಪಕ್ಕದಲ್ಲಿ ಗಿಡಗಂಟಿಗಳು ಬೆಳೆದು ವಿಷಜಂತುಗಳ ವಾಸಸ್ಥಾನವಾಗಿತ್ತು ಎಂದು ಹೇಳಿದರು.

ಕೆರೆ ಏರಿಯ ತಡೆ ಗೋಡೆಯ ಪಕ್ಕದಲ್ಲಿ ಆಳೆತ್ತರದ ಗಿಡಗಳು ಬೆಳೆದು ತಿರುವುಗಳಲ್ಲಿ ಮುಂದೆ ಏನು ಬರುತ್ತಿದೆ ಎಂಬುದು ತಿಳಿಯುತ್ತಿರಲಿಲ್ಲ. ಮತ್ತು ಕತ್ತಲು ಸಮಯದಲ್ಲಿ ಒಬ್ಬೊಬ್ಬರೇ ಓಡಾಡದಂಥ ಸ್ಥಿತಿ ನಿರ್ಮಾಣವಾಗಿತ್ತು. ಜತೆಗೆ ವರ್ಷಕ್ಕೊಮ್ಮೆ ನಡೆಯುವ ಬಿಷ್ಟಮ್ಮನವರ ಜಾತ್ರಾ ಮಹೋತ್ಸವದಲ್ಲಿ ಅಂಗಡಿ ಮುಂಗಟ್ಟುಗಳನ್ನು ಹಾಕುವ ವರ್ತಕರಿಗೆ ಸ್ಥಳ ಹಾಗೂ ಭಕ್ತರು ಸೇರಿದಂತೆ ಸಾರ್ವಜನಿಕರಿಗೂ ಅನುಕೂಲ ಕಲ್ಪಿಸುವ ಉದ್ದೇಶದಿಂದ ಪುರಸಭೆ ಸಿಬ್ಬಂದಿಯೊಂದಿಗೆ ಸ್ವಚ್ಛ ಮಾಡಿಸಲಾಗುತ್ತಿದೆ ಎಂದು ತಿಳಿಸಿದರು.

ಜತೆಗೆ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಒದಗಿಸಿ ಕೊಡಲಾಗುವುದು. ಸಾರ್ವಜನಿಕರೂ ಕೆರೆ ಏರಿ ಅಕ್ಕಪಕ್ಕದಲ್ಲಿ ಕಸ ಕಡ್ಡಿಗಳನ್ನು ಹಾಕದೆ ಸ್ವಚ್ಛತೆ ಕಾಪಾಡಲು ಪುರಸಭೆ ಸಿಬ್ಬಂದಿಯೊಂದಿಗೆ ಕೈಜೋಡಿಸಬೇಕು. ಮತ್ತು ಯಾರೂ ಕಸ ಹಾಕದಂತೆ ತಿಳಿವಳಿಕೆ ನೀಡುವುದಕ್ಕೆ ಮುಂದಾದಾಗ ಮಾತ್ರ ಕೆರೆ ಹಾಗೂ ಬಿಷ್ಟಮ್ಮನವರ ಗದ್ದುಗೆಯನ್ನು ಸಂರಕ್ಷಿಸಿ ಸ್ವಚ್ಛತೆ ಕಾಪಾಡ ಬಹುದು ಎಂದರು.

ಆರೋಗ್ಯಾಧಿಕಾರಿ ಲೋಹಿತ್, ಮೇಸ್ತ್ರಿ ಹರೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net