

ಕಡೂರು: ಅಯ್ಯನಕೆರೆ ರೈತರ ಜೀವನಾಡಿಯ ಜತೆಗೆ ಪ್ರವಾಸಿಗರ ಹೆಮ್ಮೆಯ ತಾಣವಾಗಿದ್ದು, ಅದನ್ನು ಸ್ವಚ್ಛವಾಗಿಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಸಖರಾಯಪಟ್ಟಣ ಗ್ರಾಪಂ ಅಧ್ಯಕ್ಷೆ ರಾಜಮ್ಮ ಹೇಳಿದರು.
ಸಖರಾಯಪಟ್ಟಣದ ಅಯ್ಯನಕೆರೆ ಕೋಡಿಬಿದ್ದ ಹಿನ್ನೆಲೆಯಲ್ಲಿ ಗ್ರಾಪಂನಿಂದ ಬಾಗಿನ ಅರ್ಪಿಸಿ ಮಾತನಾಡಿ, ಐದು ವರ್ಷಗಳಿಂದ ಸತತವಾಗಿ ಕೆರೆ ತುಂಬುತ್ತಿದೆ. ಇದರಿಂದ ಈ ಭಾಗದ 16 ಹಳ್ಳಿಗಳ ಮತ್ತು ಸಾರ್ವಜನಿಕರ ಮೊಗದಲ್ಲಿ ಹರ್ಷ ಮೂಡಿದೆ. ಕೆರೆಗಳು ಎಲ್ಲರ ಸ್ವತ್ತು. ಅದನ್ನು ಸ್ವಚ್ಛವಾಗಿಡುವುದು ನಮ್ಮ ಕರ್ತವ್ಯ. ಆ ನಿಟ್ಟಿನಲ್ಲಿ ಗ್ರಾಪಂ ವಿಶೇಷ ಯೋಜನೆ ರೂಪಿಸಿದ್ದು, ಮುಂದಿನ ದಿನಗಳಲ್ಲಿ ಕಾರ್ಯಗತವಾಗಲಿದೆ. ಬರುವ ಪ್ರವಾಸಿಗರು ತಾವು ತಂದ ತಿಂಡಿಯ ಪ್ಲಾಸ್ಟಿಕ್ ಕವರ್‌ಗಳನ್ನು ನೀರಿನ ಬಾಟಲಿಗಳನ್ನು ನಿಗದಿತ ಕಸದ ಬುಟ್ಟಿಗಳಲ್ಲಿ ಹಾಕಬೇಕು ಎಂದರು.
ಗ್ರಾಪಂ ಸದಸ್ಯ ಗಣೇಶಗೌಡ ಮಾತನಾಡಿ, ಬಳ್ಳಾಳೇಶ್ವರ ಸ್ವಾಮಿಯ ಕೃಪೆಯಿಂದ ಸತತವಾಗಿ ಕೆರೆ ತುಂಬುತ್ತಿದೆ. ದೇವಾಲಯ ಸುತ್ತ ಚೈನ್‌ಲಿಂಕ್ ಮೆಸ್ ಹಾಕಲು ತೀರ್ಮಾನಿಸಲಾಗಿದೆ. ಬರುವ ಪ್ರವಾಸಿಗರಿಗೆ ಮೂಲ ಸೌಕರ್ಯ ಒದಗಿಸಲು ಕನಿಷ್ಠ ಹಣ ನಿಗದಿಪಡಿಸಿ ಮೂಲ ಸೌಕರ್ಯಗಳನ್ನು ಅಚ್ಚುಕಟ್ಟಾಗಿ ಒದಗಿಸಲು ಗ್ರಾಪಂ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಪಿಡಿಒ ಲತಾ ಮಾತನಾಡಿ, ಅಯ್ಯನಕೆರೆ ಸಣ್ಣ ನೀರಾವರಿ ಇಲಾಖೆಗೆ ಸೇರಿದ್ದು, ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಗ್ರಾಪಂನಿಂದ ಆಗುವ ಕೆಲಸವನ್ನು ಸದಸ್ಯರ ಸಹಕಾರದಿಂದ ಮಾಡಲಾಗುವುದು ಎಂದರು.
ಗ್ರಾಪಂ ಉಪಾಧ್ಯಕ್ಷೆ ತಾರಾ, ಸದಸ್ಯರಾದ ಶಕುಂತಲಾ, ಗೀತಾ, ರತ್ನಪ್ರಭಾ, ದೊಡ್ಡಮ್ಮ, ಸುಮನ್, ಚೇತನ್, ಅರುಣ, ಸರೋಜಮ್ಮ, ಝರೀನಾಬೀ, ಜಯಪ್ಪ, ಕಾವ್ಯ, ಲೊಕೇಶ್, ಬಳ್ಳಾಳೇಶ್ವರ ಸೇವಾ ಸಮಿತಿ ಅಧ್ಯಕ್ಷ ಎಸ್.ಪಿ.ಲೋಕೇಶ್ ಮತ್ತಿತರಿದ್ದರು.