ಸ್ವಚ್ಛತೆ ಕಾಪಾಡದಿದ್ದಲ್ಲಿ ತೆರಿಗೆ ಹಣ ಪೋಲು

CLEAN
ಸಂಡೂರಿನ ಶ್ರೀಶೈಲೇಶ್ವರ ಶಾಲೆಯ ವಿದ್ಯಾರ್ಥಿಗಳು ಪಟ್ಟಣದ ಪುರಸಭೆಯ ಹಿಂದಿನ ಆಟೋ ನಿಲ್ದಾಣದಲ್ಲಿ ಸೋಮವಾರ ಕಸ ಗೂಡಿಸಿದರು.
Published on

ಸಂಡೂರು: ಸಾರ್ವಜನಿಕ ಸ್ಥಳಗಳನ್ನು ನಮ್ಮ ಸ್ವಂತ ಮನೆಯ ರೀತಿ ಭಾವಿಸಿ, ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದು ಶ್ರೀಶೈಲೇಶ್ವರ ವಿದ್ಯಾಕೇಂದ್ರ ಆಡಳಿತಾಧಿಕಾರಿ ಕುಮಾರ ಎಸ್.ನಾನಾವಟೆ ಹೇಳಿದರು.

ಶ್ರಮದಾನ ಕಾರ್ಯಕ್ರಮ

ಪಟ್ಟಣದ ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಲಕ್ಷ್ಮೀ ಎಸ್.ನಾನಾವಟೆ ಬಿ.ಇಡಿ ಕಾಲೇಜು ಹಾಗೂ ವಿಷ್ಣುಪಂತ ನಾನಾವಟೆ ಡಿಗ್ರಿ ಕಾಲೇಜು ಮತ್ತು ಭಾರತೀಯ ಸುರಾಜ್ಯ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡದಿದ್ದಲ್ಲಿ ನಮ್ಮ ತೆರಿಗೆ ಹಣವನ್ನು ನಾವೇ ಪೋಲು ಮಾಡಿದಂತೆ ಆಗುತ್ತದೆ ಎಂದು ತಿಳಿಸಿದರು. ಶ್ರೀ ಶೈಲೇಶ್ವರ ವಿದ್ಯಾಕೇಂದ್ರ ಕಾರ್ಯದರ್ಶಿ ಚಿದಂಬರ್ ಎಸ್.ನಾನಾವಟೆ ಮಾತನಾಡಿ, ಇನ್ನುಮುಂದೆ ತಿಂಗಳಲ್ಲಿ ಒಂದು ದಿನವನ್ನು ಸಂಸ್ಥೆಯಿಂದ ಸ್ವಚ್ಛತಾ ಶ್ರಮದಾನಕ್ಕೆ ಮೀಸಲಿಡಲಾಗುವುದು.

ಸಂಡೂರಿನ ಸುತ್ತಲಿನ ಗ್ರಾಮಗಳನ್ನು ಆಯ್ಕೆಮಾಡಿಕೊಂಡು ಆ ಗ್ರಾಮವನ್ನು ಸಂಪೂರ್ಣ ಶ್ರಮದಾನದೊಂದಿಗೆ ಅಭಿವೃದ್ಧಿ ಪಡಿಸಲಾಗುವುದು. ಇತರ ಹಳ್ಳಿ, ಜಿಲ್ಲೆಗಳಿಗೆ ತೆರಳಿ ಪ್ರಯಾಣಿಕರ ತಂಗುದಾಣ ಸ್ವಚ್ಛವಾಗಿಡಲು ಕ್ರಮ ಕೈಗೊಳ್ಳಲಾಗುವುದು. ಶ್ರೀಶೈಲೇಶ್ವರ ವಿದ್ಯಾಕೇಂದ್ರದಿಂದ ಸ್ವಚ್ಛತೆಯ ಶ್ರಮದಾನಕ್ಕಾಗಿ ಬಿ.ಇಡಿ ಕಾಲೇಜು ಹಾಗೂ ಡಿಗ್ರಿ ಕಾಲೇಜಿನ 180 ವಿದ್ಯಾರ್ಥಿಗಳು 20 ಜನ ಸಿಬ್ಬಂದಿಯನ್ನೊಳಗೊಂಡ ತಂಡ ರಚನೆ ಮಾಡಲಾಗಿದೆ ಎಂದರು.
ಬಸ್ ನಿಲ್ದಾಣ, ಪುರಸಭೆ ಮಳಿಗೆಗಳ ಮೇಲೆ ಕುಡುಕರ, ಪುಂಡರ ಹಾವಳಿಯಿಂದ ಜಮಾವಣೆಗೊಂಡಿದ್ದ ಸಾವಿರಾರು ಮದ್ಯದ ಬಾಟಲಿಗಳನ್ನು ತೆರವುಗೊಳಿಸಲಾಯಿತು.

ಮದ್ಯದ ಬಾಟಲಿ ಹಾಗೂ ಬಿಸಾಡಿದ ತ್ಯಾಜ್ಯ, ಬಸ್ ತಂಗುದಾಣದಲ್ಲಿ ಗುಟಕಾ ಹಾಕಿಕೊಂಡು ಎಲ್ಲೆಂದರಲ್ಲಿ ಉಗಿದ ಸ್ಥಳಗಳನ್ನು, ಒಳಾಂಗಣ ಗೋಡೆಗಳಿಗೆ ಅಂಟಿಸಿದ ಭಿತ್ತಿ ಪತ್ರಗಳನ್ನು ವಿದ್ಯಾರ್ಥಿಗಳು ಸ್ವಚ್ಛಗೊಳಿಸಿದರು.

ತಹಸೀಲ್ದಾರ್ ಜಿ.ಅನಿಲ್ ಕುಮಾರ, ಪುರಸಭೆಯ ಮುಖ್ಯಾಧಿಕಾರಿ ಕೆ.ಜಯಣ್ಣ, ಪರಿಸರ ಎಂಜಿನಿಯರ್ ಶಿವರಂಜಿನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net