

ಬೆಂಗಳೂರು: ಸ್ವಚ್ಛ ಅಭಿಯಾನದ ಕಾರ್ಯಕ್ರಮದಡಿ ಬಿಬಿಎಂಪಿ ವತಿಯಿಂದ ಸ್ವಚ್ಚತೆಯೇ ಸೇವೆ-2024 (ಸ್ವಭಾವ ಸ್ವಚ್ಚತೆ, ಸಂಸ್ಕಾರ ಸ್ವಚ್ಚತೆ) ಅಭಿಯಾನವನ್ನು ನಗರದಾದ್ಯಂತ ಹಮ್ಮಿಕೊಳ್ಳಲಾಗಿದೆ.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155ನೇ ಜನ್ಮ ವರ್ಷಾಚರಣೆಯ ಸಂದರ್ಭದಲ್ಲಿ ಅವರ ಧ್ಯೇಯವಾಗಿದ್ದ ಸ್ವಚ್ಚತೆಯ ಹಾದಿಯಲ್ಲಿ ನಡೆದ ಗೌರವಾರ್ಥವಾಗಿ, ಪಾಲಿಕೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ಸ್ವಚ್ಚತೆಯೇ ಸೇವೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಸ್ವಚ್ಛತೆಯೇ ಸೇವೆ ಅಭಿಯಾನದಲ್ಲಿ ನಗರದ ನಾಗರಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಪಾಲಿಕೆ ಅಧಿಕಾರಿ/ಸಿಬ್ಬಂದಿಗಳು, ಮಾರ್ಷಲ್‌ಗಳು, ಪೌರಕಾರ್ಮಿಕರು, ಎನ್‌ಜಿಒ, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಸೇರಿ ಇನ್ನಿತರ ಸಂಸ್ಥೆಗಳ ಜತೆಗೂಡಿ ಜಾಗೃತಿ ಜಾಥಾ ಕಾರ್ಯಕ್ರಮ ನಡೆಸಲಾಗುತ್ತಿದೆ. ಅದರ ಜತೆಗೆ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಸ್ವಚ್ಛತೆಯ ಕುರಿತು ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ.
ಸ್ವಚ್ಛತಾ ಶ್ರಮದಾನ ಆಯೋಜನೆ:
ಪಾಲಿಕೆಯ ಎಲ್ಲ ವಲಯಗಳಲ್ಲಿಯೂ ವಲಯ ಆಯುಕ್ತರು, ವಲಯ ಜಂಟಿ ಆಯುಕ್ತರ ನೇತೃತ್ವದಲ್ಲಿ ಸ್ವಚ್ಛತಾ ಶ್ರಮದಾನ, ಜಾಗೃತಿ ಜಾಥಾ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ನಗರದ ರಸ್ತೆ ಬದಿ, ಪಾದಚಾರಿ ಮಾರ್ಗಗಳಲ್ಲಿ ಕಸ ಎಸೆದು ಬ್ಲಾಕ್ ಸ್ಪಾಟ್‌ಆಗಿರುವ ಸ್ಥಳಗಳನ್ನು ಸ್ವಚ್ಚಗೊಳಿಸಿ ರಂಗೋಲಿ ಬಿಡಿಸಿ, ಹೂ ಕುಂಡಗಳನ್ನಿಟ್ಟು, ಗೋಡೆಗಳಿಗೆ ಬಣ್ಣ ಬಳಿದು ಮತ್ತೆ ಆ ಸ್ಥಳದಲ್ಲಿ ಕಸ ಹಾಕದಂತೆ ಜಾಗೃತಿ ಮೂಡಿಸಲಾಗುತ್ತಿದೆ.
55 ಟನ್ ತ್ಯಾಜ್ಯ ಸಂಗ್ರಹ:
ನಗರದಾದ್ಯಂದ ಕಳೆದ 14ರಿಂದ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದ್ದು, ಎಲ್ಲೆಡೆ ಸಕ್ರಿಯವಾಗಿ ಸ್ವಚ್ಛತಾ ಕಾರ್ಯವನ್ನು ನಡೆಸಲಾಗುತ್ತಿದೆ. ಅದರಂತೆ 55 ಕಿ.ಮೀ. ಉದ್ದದ ರಸ್ತೆಗಳು ಮತ್ತು ಇತರ ಸ್ಥಳಗಳನ್ನು ಸ್ವಚ್ಛಗೊಳಿಸುವ ಸ್ಥಳಗಳಿಂದ ಸುಮಾರು 50 ಟನ್ ತ್ಯಾಜ್ಯವನ್ನು ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.