

ಮಡಿಕೇರಿ:
ನಂಜರಾಯಪಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣ ಅನೈರ್ಮಲ್ಯದಿಂದ ಕೂಡಿರುವ ಬಗ್ಗೆ ನಾಗರಿಕರು ಸ್ಥಳೀಯ ಗ್ರಾಮ ಪಂಚಾಯತಿಗೆ ದೂರು ನೀಡಿದ್ದರು. ಕೂಡಲೇ ಸ್ಪಂದಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್. ವಿಶ್ವ ಗುರುವಾರ ಆಸ್ಪತ್ರೆ ಆವರಣವನ್ನು ಸ್ವಚ್ಛ ಮಾಡಿಸಿದ್ದಾರೆ. ಗ್ರಾ.ಪಂ. ಅಧ್ಯಕ್ಷರ ತುರ್ತು ಸ್ಪಂದನೆಗೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತಮುತ್ತ ಮದ್ಯಪಾನಕ್ಕೆ ಉಪಯೋಗಿಸಿದ ವಸ್ತುಗಳು, ಬಾಟಲ್, ಲೋಟ ಇತರೆ ತ್ಯಾಜ್ಯ ಚೆಲ್ಲಿಡಲಾಗಿತ್ತು. ಗ್ರಾಮ ಪಂಚಾಯಿತಿ ಸಿಬ್ಬಂದಿ ಅರಗಿಣಿ ಮತ್ತು ರಾಮು ಅವರ ಮೂಲಕ ಇವುಗಳನ್ನು ಸ್ಥಳದಿಂದ ತೆಗೆಸಿ ಸ್ವಚ್ಛ ಮಾಡಲಾಗಿದೆ. ಈ ವೇಳೆ ಮಾತನಾಡಿದ ವಿಶ್ವ, ಪ್ರಾಥಮಿಕ ಆರೋಗ್ಯ ಕೇಂದ್ರ ಸಾರ್ವಜನಿಕ ಆಸ್ತಿ ಆಗಿದೆ. ಅದರಿಂದ ಸಾರ್ವಜನಿಕ ಆಸ್ತಿಯನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಯಾರೋ ಕಿಡಿಗೇಡಿಗಳು ಮಾಡಿದ ಕೆಲಸಕ್ಕೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯನ್ನು ದೂಷಿಸುವುದು ಸರಿಯಲ್ಲ. ಸರ್ಕಾರಿ ಕಚೇರಿಗಳು ಸಾರ್ವಜನಿಕರಿಗೆ ಉಪಯೋಗಕ್ಕೆ ಇರುತ್ತದೆ. ಹಾಗಾಗಿ ಎಲ್ಲರೂ ಸಹಕರಿಸಿದರೆ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಬಹುದು. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.