ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸ್ವಚ್ಛೋತ್ಸವಕ್ಕೆ ಚಾಲನೆ

New Railway station New
Published on

ಹುಬ್ಬಳ್ಳಿ : ನೈಋತ್ಯ ರೈಲ್ವೆ ವಲಯದ ವತಿಯಿಂದ ಇಲ್ಲಿ ಶ್ರೀ ಸಿದ್ಧಾರೂಢ ಸ್ವಾಮಿ ನಿಲ್ದಾಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸ್ವಚ್ಛೋತ್ಸವ (ಸ್ವ್ವ್ಚತಾ ಹೀ ಸೇವಾ) ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಸ್ವಚ್ಛತಾ ಶ್ರಮದಾನದ ಮೂಲಕ ಚಾಲನೆ ನೀಡಿದರು.

ಸ್ವಚ್ಛತೆ ಕುರಿತು ಪ್ರಮಾಣ ವಚನ ಬೋಧಿಸಿದ ಸಚಿವ ಜೋಶಿ, ರೈಲು ನಿಲ್ದಾಣ ಬಳಿಯ ಉದ್ಯಾನದಲ್ಲಿ ಸಸಿ ನೆಟ್ಟರು.

ಅಕ್ಟೋಬರ್ 2 ರವರೆಗೆ ದೇಶಾದ್ಯಂತ ನಡೆಯಲಿರುವ ಸ್ವಚ್ಛೋತ್ಸವ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆ ವಲಯದಿಂದಲೂ ಸ್ವಚ್ಚತಾ ಅಭಿಯಾನದ ಅಡಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಪ್ರಲ್ಹಾದ ಜೋಶಿ, ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛತೆ ಬಗ್ಗೆ ತೆಗೆದುಕೊಂಡು ನಿರ್ಧಾರ ದೇಶಾದ್ಯಂತ ಸಾಕಷ್ಟು ಪರಿಣಾಮ ಬೀರಿದೆ ಎಂದರು.

ಸಣ್ಣ ಮಕ್ಕಳು ಸಹ ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಬೇಕೆಂಬ ಅರಿವು ಜನಸಾಮಾನ್ಯರಲ್ಲಿ ಮೂಡಿದೆ. ಹಿಂದಿನ ದಿನಗಳಿಗೆ ಹೋಲಿಸಿದರೆ ಜನರಲ್ಲಿ ಸ್ವಚ್ಛತೆ ಬಗ್ಗೆ ಸಾಕಷ್ಟು ಅರಿವು ಮೂಡಿದೆ. ಸ್ವಚ್ಛತಾ ಕಾರ್ಯ ಚಳವಳಿ ರೂಪಪಡೆದುಕೊಂಡಿದೆ ಎಂದು ಹೇಳಿದರು.

ದೆಹಲಿಯ ಶಾಸ್ತ್ರಿ ಭವನದಲ್ಲಿ ಎರಡು ವರ್ಷಗಳ ಹಿಂದೆ ಗುಜರಿ ವಸ್ತುಗಳು, 1950-60ರ ಕಾಲದ ಕಡತಗಳು ಇದ್ದವು. ನಿತ್ಯ ಅನೇಕರು ಆ ಭವನದ ಎದುರು ತಿರುಗಾಡಿದರೂ ನಮಗೇಕೆ ? ಎಂಬ ಮನೋಭಾವನೆಯಿಂದ ಸುಮ್ಮನಾಗುತ್ತಿದ್ದರು. ಅಧಿಕಾರಿಗಳಲ್ಲಿ ಸ್ವಚ್ಚತೆ ಬಗ್ಗೆ ಇದ್ದ ನಿರ್ಲಕ್ಷ್ಯ ಎಷ್ಟೆಂಬುದು ಇದರಿಂದ ಗೊತ್ತಾಗುತ್ತಿತ್ತು. ಆದರೆ, ಪ್ರಧಾನಿ ಅವರು ಇಂತಹ ನಿರ್ಲಕ್ಷ್ಯತನ ಸಹಿಸುವುದಿಲ್ಲವೆಂದರು. ಅಲ್ಲಿದ್ದ ಬೇಡವಾಗಿದ್ದ ಕಡತಗಳು, ತ್ಯಾಜ್ಯಗಳನ್ನು ಗುಜರಿಗೆ ಹಾಕಲಾಯಿತು. ಇದೀಗ ಶಾಸ್ತ್ರಿ ಭವನದ ಕೋಣೆಗಳು ಕಚೇರಿಗಳಾಗಿ ಪರಿವರ್ತನೆಗೊಂಡಿವೆ ಎಂದು ತಿಳಿಸಿದರು.

ಈ ಮೊದಲು ರೈಲು ನಿಲ್ದಾಣಗಳೆಂದರೆ ಗಲೀಜು ಇರುತ್ತವೆ ಎಂಬ ಭಾವನೆ ಇತ್ತು. ಆದರೆ, ಇಂದು ರೈಲು ನಿಲ್ದಾಣಗಳು ವಿಮಾನ ನಿಲ್ದಾಣಗಳ ಮಾದರಿಯಲ್ಲಿ ಅಭಿವೃದ್ಧಿ ಹೊಂದುತ್ತಿವೆ. ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಪ್ರಯಾಣಿಕರು ಸಹ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದರು.

ಶಾಸಕ ಮಹೇಶ ಟೆಂಗಿನಕಾಯಿ, ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಥೂರ, ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಬೇಲಾ ಮೀನಾ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net