

ಮಡಿಕೇರಿ: ಕೊಡಗು ಗೌಡ ಸಮಾಜಗಳ ಒಕ್ಕೂಟದ ವತಿಯಿಂದ ಕುಶಾಲನಗರದಿಂದ ಪುಣ್ಯ ಕ್ಷೇತ್ರ ತಲಕಾವೇರಿವರೆಗೆ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು.
ತೀರ್ಥೋದ್ಭವದ ಬಳಿಕ ರಸ್ತೆಯ ಇಕ್ಕೆಲಗಳಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರು ಎಸೆದಿದ್ದ ಕಸಗಳನ್ನು ಹೆಕ್ಕಿ ಸ್ವಚ್ಛ ಮಾಡುವುದರೊಂದಿಗೆ ರಸ್ತೆ ಬದಿ ಕಸಗಳನ್ನು ಎಸೆಯದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಕುಶಾಲನಗರ ಗಡಿ ಭಾಗದಲ್ಲಿರುವ ಕಾವೇರಿ ಪ್ರತಿಮೆಗೆ ಮಂಗಳವಾರ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಕುಶಾಲನಗರ ಪಟ್ಟಣ ಸೇರಿದಂತೆ ರಸ್ತೆಯ ಉದ್ದಗಲಕ್ಕೂ ಬಿದ್ದಿದ್ದ ಪ್ಲಾಸ್ಟಿಕ್ ಸೇರಿದಂತೆ ಕಸಗಳನ್ನುಬ ಹೆಕ್ಕಿ ಸ್ವಚ್ಛಗೊಳಿಸಲಾಯಿತು. ನಂತರ ಗುಡ್ಡೆಹೊಸೂರು ಗ್ರಾಮದಲ್ಲಿ ಅಲ್ಲಿನ ಗೌಡ ಸಮಾಜದವರು ಕಾರ್ಯಕ್ಕೆ ಸಾಥ್ ನೀಡಿದರು. ಗದ್ದೆಹಳ್ಳದಿಂದ ಚೆಟಳ್ಳಿಯ ಚೇರಳ ಗೌಡ ಸಮಾಜದವರು ಸ್ವಚ್ಛತಾ ಕಾರ್ಯವನ್ನು ಮುಂದುವರಿಸಿದರು. ಬೋಯಿಕೇರಿಯಿಂದ ಮಡಿಕೇರಿವರೆಗೆ ಮಕ್ಕಂದೂರು ಗೌಡ ಸಮಾಜದವರು ಶ್ರಮದಾನ ಮಾಡಿದರು.
ಮಡಿಕೇರಿಯಲ್ಲಿ ಚಾಲನೆ: ಮಡಿಕೇರಿಯಲ್ಲಿ ಕೊಡಗು ಗೌಡ ಸಮಾಜಗಳ ಒಕ್ಕೂಟ, ಕೊಡಗು ಗೌಡ ಸಮಾಜ, ಕೊಡಗುಬಗೌಡ ವಿದ್ಯಾ ಸಂಘ, ಕೊಡಗು ಗೌಡ ಯುವ ವೇದಿಕೆ, ಗೌಡ ಮಹಿಲಾ ಒಕ್ಕೂಟ, ಗೌಡ ಮಾಜಿ ಸೈನಿಕರ ಸಂಘ ಹಾಗೂ ವಿವಿಧ ಗೌಡ ಒಕ್ಕೂಟಗಳ ವತಿಯಿಂದ ಸ್ವಚ್ಛತಾ ಕಾರ್ಯಕ್ಕೆ ಬುಧವಾರ ಚಾಲನೆ ನೀಡಲಾಯಿತು.
ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಸುಬೆದಾರ್ ಗುಡ್ಡೆಮನೆ ಅಪ್ಪಯ್ಯ ಗೌಡ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ನಂತರ ಪ್ರತಿಮೆ ಆವರಣ ಹಾಗೂ ಸನಿಹದಲ್ಲಿರುವ ರಾಷ್ಟದ ಪ್ರಪ್ರಥಮ ಮಹಾ ದಂಡನಾಯಕ ಫೀ.ಮಾ.ಕೆ.ಎಂ.ಕಾರ್ಯಪ್ಪರವರ ಪ್ರತಿಮೆಯ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಶ್ರಮದಾನ ಮಾಡಲಾಯಿತು.
ಈ ಸಂದರ್ಭ ಕೊಡಗು ಗೌಡ ಸಮಾಜಗಳ ಒಕ್ಕೂಟ ಅಧ್ಯಕ್ಷ ಸೂರ್ತಲೆ ಆರ್.ಸೋಮಣ್ಣ ಮಾತನಾಡಿ, ಕೊಡಗು ಜಿಲ್ಲೆ ಪ್ರವಾಸಿ ತಾಣ ಎಂಬುದು ಎಲ್ಲರಿಗೂ ತಿಳಿದಿದೆ. ಪ್ರವಾಸಿತಾಣವನ್ನು ಸುಚಿತ್ವಗೊಳಿಸುವುದು ನಾಗರಿಕರಾದ ನಮ್ಮ ಕರ್ತವ್ಯ ಕೂಡ ಹೌದು. ಪರಿಣಾಮ ಹಲವು ದಿನಗಳಿಂದ ಚರ್ಚೆ ನಡೆಸಲಾಗಿತ್ತು. ತುಲಾ ಸಂಕ್ರಮಣ ಮತ್ತು ದಸರಾ ಹಿನ್ನೆಲೆ ಹೆಚ್ಚಾಗಿ ಪ್ರವಾಸಿಗರು ಜಿಲ್ಲೆಗೆ ಆಗಮಿಸುತ್ತಾರೆ. ಪರಿಣಾಮ ರಸ್ತೆ ಇಕ್ಕೆಲಗಳಲ್ಲಿ ಅಶುಚಿತ್ವ ಹೆಚ್ಚಾಗಿರುತ್ತದೆ. ಈ ಹಿನ್ನೆಲೆ ಇಂದು ಜಿಲ್ಲೆಯ ಎಲ್ಲಾ ಗೌಡ ಸಮಾಜ ಮತ್ತು ಸಂಘಟನೆಗಳ ಸಹಯೋಗದೊಂದಿಗೆ ಸ್ವಚ್ಛತಾ ಕಾರ್ಯಕ್ರಮ ನಡೆಸಿದ್ದೇವೆ ಎಂದು ತಿಳಿಸಿದರು.
ಇದು ಶುಚಿತ್ವಗೊಳಿಸುವ ಕಾರ್ಯಕ್ರಮ ಮಾತ್ರವಲ್ಲ. ದೇಶ ಮತ್ತು ರಾಜ್ಯದ ವಿವಿಧೆಡೆಯಿಂದ ಆಗಮಿಸುವ ಪ್ರವಾಸಿಗರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ, ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ಉಪಾಧ್ಯಕ್ಷ ಬಾಳಾಡಿ ಮನೋಜ್, ಕಾರ್ಯದರ್ಶಿ ಕಟ್ಟೆಮನೆ ರೋಶನ್, ಮಹಿಳಾ ಒಕ್ಕೂಟದ ಮಾಜಿ ಕಾರ್ಯದರ್ಶಿ ಕೂಡಕಂಡಿ ಕಾವೇರಮ್ಮ ಸೋಮಣ್ಣ, ಕೆಡಿಕೆ ಸಹಕಾರ ಸಂಘದ ಅಧ್ಯಕ್ಷ ಪಾಣತ್ತಲೆ ಪಳಂಗಪ್ಪ, ಮಕ್ಕಂದೂರು ಗೌಡ ಸಮಾಜದ ಅಧ್ಯಕ್ಷ ತೂಟೇರ ವೆಂಕಟರಮಣ, ಮಾಜಿ ಸೈನಿಕರ ಸಂಘದ ಚೌಕಿ ರಘು ತಿಮ್ಮಯ್ಯ, ಸ್ಕೌಟ್ ಮತ್ತು ಗೈಡ್ಸ್‌ನ ಪುದಿಯನೆರವನ ರೇವತಿ ರಮೇಶ್, ನಗರ ಸಬಾ ಸದಸ್ಯೆ ಕುಟ್ಟನ ಶ್ವೇತಾ ಪ್ರಶಾಂತ್ ಇತರರು ಪಾಲ್ಗೊಂಡಿದ್ದರು.
ಯುವ ವೇದಿಕೆ ಭಾಗಿ: ಜ. ತಿಮ್ಮಯ್ಯ ವೃತ್ತದಿಂದ ಕೊಡಗು ಗೌಡ ಯುವ ವೇದಿಕೆಯವರು ಶ್ರಮದಾನ ಮುಂದುವರಿಸಿದರು. ಮಂಗಳೂರು ರಸ್ತೆಯುದ್ದಕ್ಕೂ ರಾಶಿ ಬಿದ್ದಿದ್ದ ಕಸ, ಮದ್ಯದ ಬಾಟಲಿಗಳನ್ನು ಹೆಕ್ಕಿ ಸ್ವಚ್ಛ ಮಾಡಿದರು. ಭಾಗಮಂಡಲ ರಸ್ತೆಯ ತಾಳತ್‌ಮನೆವರೆಗೆ ಯುವ ವೇದಿಕೆಯವರು ಶ್ರಮದಾನ ಮಾಡಿದರು. ಗೌಡ ಜನಾಮಗದವರು ಸೇರಿದಂತೆ ಇತರರು ಕೂಡ ಈ ಒಂದು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್ ಮುಂದಾಳತ್ವದಲ್ಲಿ ಶ್ರಮದಾನ ನಡೆಯಿತು. ಚೇರಂಬಾಣೆ ಗೌಡ ಸಮಾಜ: ಬೆಟ್ಟಗೇರಿಯಿಂದ ಬೆಟ್ಟಗೇರಿ ಗ್ರಾಮಸ್ಥರು ಸೇರಿದಂತೆ ಚೇರಂಬಾಣೆ ಗೌಡ ಸಮಾಜದವರು ಸ್ವಚ್ಛತಾ ಕಾರ್ಯವನ್ನು ಮುಂದುವರಿಸಿದರು. ಇವರೊಂದಿಗೆ ಚೆಟ್ಟಿಮಾನಿ, ಕುಂದಚೇರಿ ಗ್ರಾಮಸ್ಥರು ಕೈಜೋಡಿಸಿದರು. ಚೇರಂಬಾಣೆ ಗೌಡ ಸಮಾಜದ ಅಧ್ಯಕ್ಷ ಕೊಡಪಾಲು ಗಣಪತಿ ಅವರ ನೇತೃತ್ವದಲ್ಲಿ ಶ್ರಮದಾನ ನಡೆಯಿತು. ಭಾಗಮಂಡಲ ಅತಿಥಿ ಗೃಹದಿಂದ ತಲಕಾವೇರಿವರೆಗೆ ಭಾಗಮಂಡಲದ ಗ್ರಾಮಸ್ಥರು ಶ್ರಮದಾನ ಮಾಡಿದರು.