ಮೈಸೂರಿನಲ್ಲಿ ಸ್ವಚ್ಛತಾ ಸ್ಪರ್ಧೆ

mcc (3)
Published on

ಸದೇಶ್ ಕಾರ್ಮಾಡ್ ಮೈಸೂರು
ಸ್ವಚ್ಛತೆಯಲ್ಲಿ ರಾಷ್ಟ್ರಮಟ್ಟದಲ್ಲಿ ತೀವ್ರ ಹಿನ್ನಡೆ ಸಾಧಿಸಿರುವ ಸಾಂಸ್ಕೃತಿಕ ನಗರಿ ಮೈಸೂರು 2024ನೇ ಸಾಲಿನ ಸ್ವಚ್ಛ ಸರ್ವೇಕ್ಷಣೆಯಲ್ಲಿ ಮರಳಿ ದೇಶದ ಟಾಪ್-10 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಿದ್ಧತೆ ಪ್ರಾರಂಭಿಸಿದ್ದು, ಇದಕೋಸ್ಕರ ಸ್ಪರ್ಧೆಯೊಂದನ್ನು ಏರ್ಪ ಡಿಸಿದೆ.

ನಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಬೇಕು ಎಂಬ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ನಗರ ಪಾಲಿಕೆಯ ಸ್ವಚ್ಛ ಶಾಲೆ, ಸ್ವಚ್ಛ ಆಸ್ಪತ್ರೆ, ಸ್ವಚ್ಛ ಹೋಟೆಲ್, ಸ್ವಚ್ಛ ನಿವಾಸಿ ಕ್ಷೇಮಾಭಿವೃದ್ಧಿ ಸಂಘ, ಸ್ವಚ್ಛ ಮಾರುಕಟ್ಟೆ ಸಂಘಗಳು, ಸ್ವಚ್ಛ ಸರ್ಕಾರಿ ಕಚೇರಿಗಳ ವಿಭಾಗದಲ್ಲಿ ಸ್ಪರ್ಧೆ ಏರ್ಪಡಿಸಿದೆ.

ಭಾಗವಹಿಸುವುದು ಹೇಗೆ?:

ಸ್ವಚ್ಛತಾ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಪಾಲಿಕೆ ನೀಡಿರುವ ಕ್ಯೂಆರ್ ಕೋಡ್ ಸ್ಕಾೃನ್ ಮಾಡುವ ಮೂಲಕ ಹೆಸರು ನೋಂದಾಯಿಸಿಕೊಳ್ಳಬೇಕು. ಮಾಹಿತಿಗೆ ಮೊ: 99166 94234 ಸಂಪರ್ಕಿಸಬಹುದು. ಸ್ಪರ್ಧೆಯಲ್ಲಿ ನೋಂದಾಯಿಸಿಕೊಂಡ ಶಾಲೆ, ಆಸ್ಪತ್ರೆ, ಹೋಟೆಲ್, ಸಂಘಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ಪಾಲಿಕೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಸ್ವಚ್ಛತೆಯನ್ನು ಪರಿಶೀಲಿಸಿ ಬಹುಮಾನ ನೀಡಲಾಗುವುದು.

ಸ್ಪರ್ಧೆಯನ್ನು ನಗರ ಪಾಲಿಕೆಯಿಂದ ಪ್ರತಿ ವರ್ಷ ಹಮ್ಮಿಕೊಳ್ಳಲಾಗುತಿತ್ತು. ಆದರೆ, ಕೋವಿಡ್ ನಂತರದ ವರ್ಷಗಳಲ್ಲಿ ಸ್ಪರ್ಧೆಯನ್ನು ಸ್ಥಗಿತಗೊಳಿಸಲಾಯಿತು. ಇದೀಗ ಮತ್ತೆ ಸ್ವಚ್ಛತಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಈ ರೀತಿ ಸ್ವಚ್ಛತಾ ಸ್ಪರ್ಧೆಯು ಪ್ರತಿ ಬಾರಿ ತಪ್ಪದೆ ಏರ್ಪಡಿಸದರೆ ನಗರದ ಜನರಲ್ಲಿ ಸ್ವಚ್ಛತೆ ಕುರಿತು ಹೆಚ್ಚಿನ ಅರಿವು ಮೂಡಿಸಲು ಸಹಕಾರಿಯಾಗಲಿದೆ. ಸ್ಪರ್ಧೆಯು ಫೆ.5 ರಿಂದ ಪ್ರಾರಂಭಗೊಂಡು 15 ರಂದು ಮುಕ್ತಾಯಗೊಳಲಿದೆ.

2024ರ ಸ್ವಚ್ಛ ಸರ್ವೇಕ್ಷಣೆಗೆ ತಯಾರಿ: ಈ ಬಾರಿಯ ಸ್ವಚ್ಛ ಸವೇಕ್ಷಣೆ ಫೆಬ್ರವರಿ ತಿಂಗಳಿನಿಂದ ಪ್ರಾರಂಭಗೊಂಡಿದ್ದು, ಇದಕ್ಕೆ ಪೂರಕವಾಗಿ ಜನರಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಂತ ಹಂತವಾಗಿ ಹಮ್ಮಿಕೊಳ್ಳಲು ಪಾಲಿಕೆ ನಿರ್ಧರಿಸಿದೆ. 2023ರ ಸ್ವಚ್ಛ ಸರ್ವೇಕ್ಷಣೆ ‘ವೇಸ್ಟ್ ಟು ವೆಲ್ತ್’ ಪರಿಕಲ್ಪನೆಯಲ್ಲಿ ನಡೆದಿತ್ತು. 2024ರ ಸ್ವಚ್ಛ ಸರ್ವೇಕ್ಷಣೆಯು ತ್ಯಾಜ್ಯದ ಉತ್ಪಾದನೆಯ ಪ್ರಮಾಣ ರೆಡ್ಯೂಸ್ (ಕಡಿಮೆ ಮಾಡು), ರೀಯೂಸ್ (ಮರುಬಳಕೆ) ಮತ್ತು ರೀಸೈಕಲ್ (ಪುನರ್ಬಳಕೆ) ಮಾಡುವ ಥೀಮ್‌ನಡಿ ನಡೆಯುತ್ತಿದೆ.

ಈ ಬಾರಿ ಸ್ವಚ್ಛ ಸರ್ವೇಕ್ಷಣೆಯು 9,500 ಅಂಕಗಳಿಗೆ ನಡೆಯಲಿದೆ. 2023ರ ಸ್ವಚ್ಛ ಸರ್ವೇಕ್ಷಣೆಯಲ್ಲಿ ಸರ್ವಿಸ್ ಲೆವಲ್ ಪ್ರೋಗ್ರೆಸ್‌ಗೆ 4,525, ಸರ್ಟಿಫಿಕೇಷನ್‌ಗೆ 2500, ಸಿಟಿಜನ್ ವಾಯ್ಸಗೆ 2,475 ಅಂಕಗಳನ್ನು ನಿಗದಿ ಪಡಿಸಲಾಗಿತ್ತು. 2024ರ ಸ್ವಚ್ಛ ಸರ್ವೇಕ್ಷಣೆಯಲ್ಲಿ ಸರ್ವಿಸ್ ಲೆವಲ್ ಪ್ರೋಗ್ರೆಸ್‌ಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಈ ವಿಭಾಗಕ್ಕೆ 5,705 ಅಂಕಗಳನ್ನು ನಿಗದಿಪಡಿಸಲಾಗಿದೆ. ಸರ್ಟಿಫಿಕೇಷನ್‌ಗೆ 2,500 ಅಂಕಗಳನ್ನು ನಿಗದಿ ಪಡಿಸಲಾಗಿದೆ. ಸಿಟಿಜನ್ ವಾಯ್ಸ ವಿಭಾಗದ ಹೆಸರನ್ನು ಬದಲಾಯಿಸಲಾಗಿದ್ದು, ‘ಜನ ಆಂದೋಲನ’ ಎಂದು ಕರೆಯಲಾಗಿದೆ. ಜನ ಆಂದೋಲನಕ್ಕೆ 1,295 ಅಂಕಗಳನ್ನು ನಿಗದಿ ಪಡಿಸಲಾಗಿದೆ.

ಸರ್ವಿಸ್ ಲೆವಲ್ ಪ್ರೋಗ್ರೆಸ್ ವಿಭಾಗದಲ್ಲಿ ಅಂಕಗಳನ್ನು ನೀಡುವ ಸಂದರ್ಭ ಮನೆ ಮನೆಗಳಿಂದ ತ್ಯಾಜ್ಯವನ್ನು ಹಸಿ ಮತ್ತು ಒಣ ಕಸವಾಗಿ ವಿಂಗಡಿಸಿ ನೀಡಲಾಗುತ್ತಿದೆಯೇ?, ಸಂಗ್ರಹಿಸಿದ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ ಸಂಸ್ಕರಣೆ ಮಾಡಲಾಗುತ್ತಿದೆಯೇ? ನಗರದಲ್ಲಿ ನೈರ್ಮಲ್ಯವನ್ನು ಸದಾ ಉತ್ತಮವಾಗಿ ಕಾಪಾಡಲಾಗುತ್ತಿದೆಯೇ?, ಒಳಚರಂಡಿ ಶುಚಿಗೊಳಿಸಲು ಯಂತ್ರೋ ಪಕರಣ ಬಳಕೆ ಮಾಡಲಾಗುತ್ತಿದೆಯೇ ಎಂಬ ಅಂಶಗಳನ್ನು ಪ್ರಮುಖವಾಗಿ ಗಮನಿಸಲಾಗುತ್ತದೆ. ಈ ವಿಭಾಗದಲ್ಲಿಯೇ ಈ ಬಾರಿ ನಗರ ಹಿನ್ನಡೆಯನ್ನು ಅನುಭವಿಸಿದೆ.

ಸರ್ಟಿಫಿಕೇಷನ್‌ಗೆ 2,500 ಅಂಕಗಳನ್ನು ನಿಗದಿ ಪಡಿಸಲಾಗಿದ್ದು, ಪೂರ್ಣ ಅಂಕಗಳನ್ನು ಪಡೆಯಲು ಬಯಲು ಶೌಚ ಮುಕ್ತ ನಗರ ವಿಭಾಗದಲ್ಲಿ ವಾಟರ್ ಪ್ಲಸ್ ಸಿಟಿ ರ‌್ಯಾಂಕಿಂಗ್ ಪಡೆಯಬೇಕು. ಅದೇ ರೀತಿ ತ್ಯಾಜ್ಯಮುಕ್ತ ನಗರ ವಿಭಾಗದಲ್ಲಿ 7ಸ್ಟಾರ್ ರೇಟಿಂಗ್ ಪಡೆಯಬೇಕು. ಮೈಸೂರು ನಗರ 2023ರ ಸ್ವಚ್ಛ ಸರ್ವೇಕ್ಷಣೆಯಲ್ಲಿ ವಾಟರ್ ಸಿಟಿ ರ‌್ಯಾಂಕಿಂಗ್ ಪಡೆದಿದೆ. ಆದರೆ, ತ್ಯಾಜ್ಯ ಮುಕ್ತ ನಗರ ವಿಭಾಗದಲ್ಲಿ ಮೈಸೂರು 5 ಸ್ಟಾರ್ ರೇಟಿಂಗ್‌ನಿಂದ 3 ಸ್ಟಾರ್‌ಗೆ ಕುಸಿತ ಕಂಡಿದ್ದು, ಈ ವಿಭಾಗದಲ್ಲಿ ಸುಧಾರಣೆ ಕಾಣುವ ಅವಶ್ಯಕತೆ ಇದೆ.

ಸ್ವಚ್ಛತೆಯಲ್ಲಿ ನಗರದ ಸಾಧನೆ:

ನಗರವು ಸ್ವಚ್ಛ ಸವೇಕ್ಷಣೆಯಲ್ಲಿ 2015 ಮತ್ತು 2016ರಲ್ಲಿ ರಾಷ್ಟ್ರಮಟ್ಟದಲ್ಲಿ ನಂ.1 ಸ್ಥಾನ ಪಡೆದುಕೊಂಡಿತ್ತು. 2017ರಲ್ಲಿ 5ನೇ ಸ್ಥಾನ, 2018 ರಲ್ಲಿ 8ನೇ ಸ್ಥಾನ, 2019ರಲ್ಲಿ 3ನೇ ಸ್ಥಾನ, 2020ರಲ್ಲಿ 5ನೇ ಸ್ಥಾನ, 2021ರಲ್ಲಿ 11ನೇ ಸ್ಥಾನ, 2022ರಲ್ಲಿ 8ನೇ ಸ್ಥಾನ, 2023ರಲ್ಲಿ 27 ಸ್ಥಾನ ಪಡೆದುಕೊಂಡಿತ್ತು.

ಸ್ವಚ್ಛತೆಯಲ್ಲಿ ನಗರದ ಸಾರ್ವಜನಿಕರ ಸಹಭಾಗಿತ್ವವನ್ನು ಪ್ರೋತ್ಸಾಹಿಸುವ ಸಲುವಾಗಿ ನಗರ ಪಾಲಿಕೆಯಿಂದ ಸ್ವಚ್ಛತಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗುವ ಶಾಲೆ, ಆಸ್ಪತ್ರೆ, ಹೋಟೆಲ್, ಸಂಘಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ಪಾಲಿಕೆಯಿಂದ ಬಹುಮಾನ ನೀಡಲಾಗುವುದು. ಸ್ವಚ್ಛತೆಗೆ ಪ್ರತಿಯೊಬ್ಬರು ಕೈಜೋಡಿಸಿದಾಗ ಮಾತ್ರ ನಗರವನ್ನು ಶುಚಿಯಾಗಿಡಲು ಸಾಧ್ಯ. ಈ ಸ್ಪರ್ಧೆಯು ಜನರಲ್ಲಿ ಸ್ವಚ್ಛತೆ ವಿಚಾರದಲ್ಲಿ ಆರೋಗ್ಯಕರ ಪೈಪೋಟಿ ಏರ್ಪಡುವಂತೆ ಮಾಡಿ ಸ್ವಚ್ಛತೆ ಕುರಿತು ಹೆಚ್ಚಿನ ಅರಿವು ಮೂಡಿಸಲು ಸಹಕಾರಿಯಾಗಲಿದೆ.
ಡಾ.ವೆಂಕಟೇಶ್, ನಗರ ಪಾಲಿಕೆ ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net