ಹೋಟೆಲ್‌ಗಳಲ್ಲಿ ಸ್ವಚ್ಛತೆ ಪರಿಶೀಲನೆ

18HDK0006
Published on

 ಎಚ್.ಡಿ.ಕೋಟೆ: ಪಟ್ಟಣದ ಹೋಟೆಲ್‌ಗಳಲ್ಲಿ ಇಡ್ಲಿ ತಯಾರಿಸುವಾಗ ಪ್ಲಾಸ್ಟಿಕ್ ಬಳಸುತ್ತಿರುವ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿ ಹೋಟೆಲ್‌ಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ದಂಡ ವಿಧಿಸಿದರು.

ತಾಲೂಕು ಆಹಾರ ಸುರಕ್ಷತಾಧಿಕಾರಿ ಡಾ.ರವಿಕುಮಾರ್ ಹಾಗೂ ಪುರಸಭಾ ಮುಖ್ಯಾಧಿಕಾರಿ ಸುರೇಶ್ ಅವರ ತಂಡ ಮಂಗಳವಾರ ಹೋಟೆಲ್‌ಗಳಿಗೆ ಮತ್ತು ಬೀದಿ ಬದಿ ವ್ಯಾಪಾರಿಗಳ ಮಳಿಗೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ತಾಲೂಕು ಆಹಾರ ಸುರಕ್ಷತಾಧಿಕಾರಿ ಡಾ. ರವಿಕುಮಾರ್, ರಾಜ್ಯಾದಂತ ಪ್ಲಾಸ್ಟಿಕ್‌ಗಳನ್ನು ನಿಷೇಧ ಮಾಡಲಾಗಿದೆ. ಯಾವುದೇ ಆಹಾರ ಪದಾರ್ಥಗಳಿಗೆ ಆಹಾರ ತಯಾರಿಸಲು ಹಾಗೂ ಆಹಾರವನ್ನು, ಪಾರ್ಸೆಲ್ ಕಟ್ಟಿಕೊಡಲು ಪ್ಲಾಸ್ಟಿಕ್‌ಗಳನ್ನು ಬಳಸುವಂತಿಲ್ಲ.

ಎಲ್ಲ ಹೋಟೆಲ್, ಕ್ಯಾಂಟೀನ್ ಮತ್ತು ಬೀದಿಬದಿ ವ್ಯಾಪಾರಿಗಳು ಜನರಿಗೆ ಶುದ್ಧವಾದ ಆಹಾರವನ್ನು ನೀಡಬೇಕು. ಆಹಾರವನ್ನು ತಯಾರಿಸಿದ ನಂತರ ಮುಚ್ಚಿಡಬೇಕು, ಅಡುಗೆಮನೆಯನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು, ಬೇಸಿಗೆ ಕಾಲದಲ್ಲಿ ಜನರಿಗೆ ಕುಡಿಯಲು ಕಡ್ಡಾಯವಾಗಿ ಬಿಸಿ ನೀರು ನೀಡಬೇಕು ಎಂದು ತಿಳಿಸಿದರು.

ನಂತರ ಹೋಟೆಲ್‌ಗಳಿಂದ ಆಹಾರ ಪದಾರ್ಥಗಳನ್ನು (ಇಡ್ಲಿ, ಚಟ್ನಿ, ಸಾಂಬಾರ್) ತೆಗೆದುಕೊಂಡು ಜಿಲ್ಲಾ ಮಟ್ಟದ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಯಿತು. ನಿಯಮ ಮೀರಿದ ಮಾಲೀಕರಿಗೆ ನೋಟಿಸ್ ನೀಡಿ ದಂಡ ವಿಧಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net