

ಕಾರ್ಗಲ್: ಕಾಳಮಂಜಿ ಗ್ರಾಮಸ್ಥರು ಬಿದರೂರು ವೃತ್ತ, ಕಾಳಮಂಜಿ ವೃತ್ತ ಹಾಗೂ ಲಿಂಗನಮಕ್ಕಿ ವೃತ್ತದಲ್ಲಿನ ಬಸ್ ತಂಗುದಾಣಗಳನ್ನು ಸ್ವಚ್ಛಗೊಳಿಸಿದರು.
ಮದ್ಯದ ಬಾಟಲಿಗಳನ್ನು ಆಯ್ದು ಸ್ವಚ್ಛಗೊಳಿಸಿದ ಗ್ರಾಮಸ್ಥರು, ತಂಗುದಾಣಗಳಲ್ಲಿ ಕುಳಿತು ಮದ್ಯ ಸೇವಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಕಾರ್ಗಲ್ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದರು.
ಅರಳಗೋಡು ಗ್ರಾಪಂ ಸದಸ್ಯ ಶರತ್ ಕಾಳಮಂಜಿ ಮಾತನಾಡಿ, ಇಲ್ಲಿನ ನಿಲ್ದಾಣಗಳಲ್ಲಿ ಪ್ರತಿದಿನ ಸಂಜೆ 6ರಿಂದ ರಾತ್ರಿ 10ರ ತನಕ ಮದ್ಯಪಾನ ಮಾಡುವವರ ಸಂಖ್ಯೆ ಇತ್ತೀಚೆಗೆ ಜಾಸ್ತಿ ಆಗುತ್ತಿದೆ. ಕುಡಿದ ಮದ್ಯದ ಬಾಟಲಿಗಳನ್ನು ಇಲ್ಲೇ ಎಸೆದು ಹೋಗುತ್ತಿದ್ದಾರೆ. ಇಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯದಲ್ಲಿ ಶೇ.90 ಮದ್ಯದ ಬಾಟಲಿಗಳೇ ಇವೆ. ಜತೆಗೆ ರಾತ್ರಿ ಹೊತ್ತು ಓಡಾಡುವವ ಮಹಿಳೆಯರಿಗೆ ಸುರಕ್ಷಿತ ವಾತಾವರಣವಿಲ್ಲ ಎಂದು ದೂರಿದರು. ಆದಕಾರಣ ಪೊಲೀಸರು ನಿತ್ಯ ಸಂಜೆ ಗಸ್ತು ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು.