

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಮತ್ತು ಬಿಜೆಪಿ ಮುಖಂಡ ಸುಬ್ಬನರಸಿಂಹ ನೇತೃತ್ವದಲ್ಲಿ ಸೋಮವಾರ ಸ್ವಚ್ಛತಾ ಅಭಿಯಾನ ನಡೆಸಲಾಯಿತು.
ಸುಮಾರು ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರು ಶ್ರೀಮಠದ ಆವರಣ ಮತ್ತು ಮಂತ್ರಾಲಯದ ವಿವಿಧೆಡೆ ಸ್ವಚ್ಛತೆ ಕಾರ್ಯ ಕೈಗೊಂಡರು. ಶ್ರೀಮಠದ ಪೀಠಾಪತಿ ಡಾ.ಸುಬುಧೇಂದ್ರ ತೀರ್ಥರು ಸ್ವತಃ ಕಸಬರಿಗೆ ಹಿಡಿದು ಕಸಗೂಡಿಸುವ ಮೂಲಕ ಅಭಿಯಾನಕ್ಕೆ ಕೈಜೋಡಿಸಿದರು.
ಈ ಸಂದರ್ಭದಲ್ಲಿ ಡಾ.ಸುಬುಧೇಂದ್ರ ತೀರ್ಥರು ಆಶೀರ್ವಚನ ನೀಡಿ, ಶ್ರೀಮಠದಿಂದ ಸ್ವಚ್ಛ ಮಂತ್ರಾಲಯ ಯೋಜನೆ ಹಮ್ಮಿಕೊಳ್ಳಲಾಗಿದ್ದು, ಭಕ್ತರು ಸ್ವಚ್ಛತೆಗೆ ಸಹಕರಿಸುವ ಮೂಲಕ ಸ್ವಚ್ಛ ಮಂತ್ರಾಲಯ ಯೋಜನೆಯನ್ನು ಯಶಸ್ವಿಗೊಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ, ಶ್ರೀಮಠದ ವ್ಯವಸ್ಥಾಪಕರಾದ ಎಸ್.ಕೆ.ಶ್ರೀನಿವಾಸರಾವ್, ವೆಂಕಟೇಶ ಜೋಷಿ, ಆಡಳಿತಾಕಾರಿ ಮಾಧವಶೆಟ್ಟಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.