42 ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ

Cleanliness campaign in 42 gram panchayats
Published on

ಹಾನಗಲ್ಲ: ಪ್ರತಿ ತಿಂಗಳ ಮೂರನೇ ಶನಿವಾರ ತಾಲೂಕಿನ 42 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ತಾಪಂ ಹಾಗೂ ಗ್ರಾಪಂ ನೌಕರರ ಪಾಲ್ಗೊಳ್ಳುವಿಕೆ ಮೂಲಕ ಸ್ವಚ್ಛತಾ ಅಭಿಯಾನ ಆರಂಭವಾಗಿದೆ.

ಪಟ್ಟಣದಲ್ಲಿ ಪ್ರತಿ ಬುಧವಾರ ನಗರದ ಸ್ವಚ್ಛತೆಗೆ ವಿವಿಧ ಇಲಾಖೆಗಳ ನೌಕರರು ಹಾಗೂ ಸದಸ್ಯರು ಜತೆಗೂಡಿ ಸ್ವಚ್ಛತೆ ಅಭಿಯಾನ ನಡೆಸಿದ್ದರು. ಪುರಸಭೆ ಈ ಕ್ರಮ 25 ವಾರ ಪೂರೈಸಿ, ಒಂದು ವರ್ಷದವರೆಗೆ ಮುಂದುವರಿಸಿದೆ. ಶಾಸಕ ಶ್ರೀನಿವಾಸ ಮಾನೆ ಅವರು ಗ್ರಾಮಗಳ ಸ್ವಚ್ಛತಾ ಕಳಕಳಿ ವ್ಯಕ್ತಪಡಿಸಿ ತಾಲೂಕಿನ ಎಲ್ಲ 42 ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ ಆರಂಭಿಸುವಂತೆ ಸೂಚನೆ ನೀಡಿದ್ದರು. ಅವರ ಸೂಚನೆಯಂತೆ ಇದೇ ಮೂರನೇ ಶನಿವಾರ ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಗ್ರಾಪಂ ನೌಕರರು ಹಾಗೂ ಸದಸ್ಯರು ಪಾಲ್ಗೊಂಡರು.

ತಾಲೂಕಿನಲ್ಲಿ 630 ಗ್ರಾಪಂ ನೌಕರರು, 600 ಗ್ರಾಪಂ ಸದಸ್ಯರಿದ್ದಾರೆ. ವರ್ಷವಿಡೀ ಪ್ರತಿ 3ನೇ ಶನಿವಾರ ಸಾರ್ವಜನಿಕರ ಸಹಭಾಗಿತ್ವದಲ್ಲಿ ಗ್ರಾಮಗಳ ಸ್ವಚ್ಛತಾ ಕಾರ್ಯಕ್ಕೆ ಮುಂದಾದರೆ ಇಡೀ ತಾಲೂಕಿನಲ್ಲಿ ಸ್ವಚ್ಛತಾ ಅರಿವು ಮೂಡಲಿದೆ.

ನಮ್ಮ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಲು ಪ್ರೋತ್ಸಾಹಿಸುವುದು ಅಭಿಯಾನದ ಉದ್ದೇಶ. ಶಾಸಕರ ನಿರ್ದೇಶನದಂತೆ ಅಭಿಯಾನ ನಡೆಸಿ, ತಾಲೂಕಿನಲ್ಲಿ ಸ್ವಚ್ಛತಾ ಅರಿವು ಮೂಡಿಸಲಾಗುತ್ತಿದೆ. ನೌಕರರ ಪಾಲ್ಗೊಳ್ಳುವಿಕೆಯಿಂದ ಗ್ರಾಮಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿದಾಂತಾಗುತ್ತದೆ. ನಾವು ಪಾಲ್ಗೊಂಡು ಜಾಗೃತಿ ಮೂಡಿಸಿದರೆ ಅದು ಫಲಪ್ರದವಾಗಬಲ್ಲದು ಎಂಬ ಆಶಯವಿದೆ. ಇಂದು ಇಡೀ ತಾಲೂಕಿನ ಎಲ್ಲ ಗ್ರಾಪಂ ನೌಕರರು ಪಾಲ್ಗೊಂಡಿರುವುದು ಅತ್ಯಂತ ಹರ್ಷದ ಸಂಗತಿ. | ಪರಶುರಾಮ ಪೂಜಾರ ತಾಪಂ ಇಒ ಹಾನಗಲ್ಲ ಹಾನಗಲ್ಲ ಪಟ್ಟಣದಲ್ಲಿ ವಿವಿಧ ಇಲಾಖೆ ನೌಕರರು, ಜನಪ್ರತಿನಿಧಿಗಳು ಕೈಗೊಂಡ ಸ್ವಚ್ಛತಾ ಅಭಿಯಾನ ಗ್ರಾಪಂಗಳಿಗೆ ವಿಸ್ತರಿಸಲು ವಿನಂತಿಸಿದ ಮೇರೆಗೆ 42 ಗ್ರಾಪಂಗಳಲ್ಲಿ ಗ್ರಾಪಂ ನೌಕರರು ಸ್ವಇಚ್ಛೆಯಿಂದ ಪಾಲ್ಗೊಂಡಿದ್ದಾರೆ. ಇದು ನಿರಂತರ ಪ್ರಕ್ರಿಯೆಯಾಗಿ ಮುಂದುವರಿದು ತಾಲೂಕಿನಲ್ಲಿ ಸ್ವಚ್ಛತಾ ಆಂದೋಲನವೇ ಆಗಬೇಕಾಗಿದೆ. ಇದು ಅರ್ಥಪೂರ್ಣವಾಗಿ ನಡೆಯುತ್ತದೆ ಎಂಬ ಭರವಸೆಯಿದೆ. | ಶ್ರೀನಿವಾಸ ಮಾನೆ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net