

ಚಿಕ್ಕಮಗಳೂರು: ತಾಲೂಕಿನ ಸೀತಾಳಯ್ಯನ ಗಿರಿಯಿಂದ ಮುಳಯ್ಯನ ಗಿರಿವರೆಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಬೆಂಗಳೂರಿನ ಹೋಪ್ ಫೌಂಡೇಷನ್‌ನಿಂದ ಸ್ವಚ್ಚತಾ ಅಭಿಯಾನ ನಡೆಸಲಾಯಿತು.
ಗಿರಿಭಾಗ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ. ಇಲ್ಲಿನ ಸ್ವಚ್ಛತೆ ಕಾಪಾಡಬೇಕಾದ ಜವಾಬ್ದಾರಿ ಸ್ಥಳೀಯರ ಮೇಲಿದೆ. ಅಂಗಡಿಗಳಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡಿದರೆ ಕ್ರಮ ಜರುಗಿಸಲಾಗುವುದು ಎಂದು ಜಿಪಂ ಸಿಇಒ ಡಾ. ಬಿ.ಗೋಪಾಲಕೃಷ್ಣ ಎಚ್ಚರಿಕೆ ನೀಡಿದರು.
ಪ್ರವಾಸಿಗರು ಪರ್ವತ ಶ್ರೇಣಿಯಲ್ಲಿ ನೀರಿನ ಬಾಟಲ್, ತಿಂಡಿ ತಿನಿಸುಗಳ ಪ್ಲಾಸ್ಟಿಕ್ ಕವರ್ ಅನ್ನು ಎಲ್ಲೆಂದಲ್ಲಿ ಎಸೆಯುವುದು, ಮದ್ಯಪಾನ ಮಾಡಿ ಗಿರಿ ಪ್ರದೇಶವನ್ನು ಮಾಲಿನ್ಯಗೊಳಿಸುತ್ತಿದ್ದಾರೆ. ಇದಕ್ಕೆ ಜಿಲ್ಲಾಡಳಿತ ಹಾಗೂ ಜಿಪಂನಿಂದ ಕಡಿವಾಣ ಹಾಕಲಾಗುವುದು ಎಂದು ಹೇಳಿದರು.
ನಂತರ ಅಲ್ಲಿನ ಅಂಗಡಿಗಳಿಗೆ ಭೇಟಿ ನೀಡಿ ಏಕ ಬಳಕೆಯ ಪ್ಲಾಸಿಕ್ಟ್ ಬಳಸದಂತೆ ಸೂಚನೆ ನೀಡಿದರು. ಪ್ರವಾಸಿಗರು ಪ್ರಕೃತಿ ಮಾಲಿನ್ಯ ಮಾಡಲು ಬಿಡಬೇಡಿ. ಗ್ರಾಪಂನಿಂದ ಕಸದ ವಾಹನ ಕಳಿಸಲಾಗುವುದು. ಮುಂದಿನ ದಿನಗಳಲ್ಲಿ ಅಂಗಡಿಗಳಿಂದ ಘನ ತ್ಯಾಜ್ಯ ಸಂಗ್ರಹಿಸಿ ಸೂಕ್ತ ಕರ ವಸೂಲಿ ಮಾಡಲಾಗುತ್ತದೆ. ಪ್ಲಾಸ್ಟಿಕ್ ಬಳಕೆ ಮುಂದುವರಿಸಿದರೆ ಅಂಗಡಿ ಪರವಾನಗಿ ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಪಂ ಉಪಕಾರ್ಯದರ್ಶಿ ವೈ.ಸೋಮಶೇಖರ್, ಯೋಜನಾ ನಿರ್ದೇಶಕಿ ಸಿ.ಅಪೂರ್ವಾ ಅನಂತರಾಮು, ಫೌಂಡೇಷನ್ ಸದಸ್ಯರು, ಪಿಡಿಗಳು ಪಾಲ್ಗೊಂಡಿದ್ದರು.