

ಸಿದ್ದಾಪುರ: ಎಸ್‌ಕೆಎಸ್‌ಎಸ್‌ಎಫ್ ವಿಖಾಯ ಸಂಘಟನೆಯ ನೂರನೇ ಅಂತಾರಾಷ್ಟ್ರೀಯ ಸಮ್ಮೇಳನ ಅಂಗವಾಗಿ ಕೊಡಗು ಜಿಲ್ಲಾ ವಿಖಾಯ ತಂಡದಿಂದ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ವಿಖಾಯ ತಂಡದ ಕಾರ್ಯಕರ್ತರು ಸಮುದಾಯ ಆರೋಗ್ಯ ಕೇಂದ್ರದ ಸುತ್ತಮುತ್ತಲಿನ ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಿದರು.
ಎಸ್‌ಕೆಎಸ್‌ಎಸ್‌ಎಫ್ ವಿಖಾಯ ಸಂಘಟನೆಯ ಕೊಡಗು ಜಿಲ್ಲಾ ಚೇರ್ಮನ್ ಕರೀಂ ಮಾತನಾಡಿ ವಿಖಾಯ ತಂಡವು ಸಾಮಾಜಿಕ ಕಳಕಳಿಯೊಂದಿಗೆ ಸಮಾಜದ ಸಂಕಷ್ಟಕ್ಕೆ ಸ್ಪಂದಿಸಲಿದೆ. ತರಬೇತಿ ಪಡೆದ ನುರಿತರು ಸಂಘಟನೆಯಲ್ಲಿದ್ದು, ಪ್ರಳಯ, ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸೇನೆಯೊಂದಿಗೆ ಕೈಜೋಡಿಸುವ ಮೂಲಕ ಸಮಾಜದ ನೆರವಿಗೆ ನಿಂತಿದೆ ಎಂದರು.
ಎಸ್‌ಕೆಎಸ್‌ಎಸ್‌ಎಫ್ ವಿಖಾಯ ಸಂಘಟನೆಯ ಅಂತಾರಾಷ್ಟ್ರೀಯ ಸಮ್ಮೇಳ ಕಾಸರಗೋಡಿನಲ್ಲಿ ನಡೆಯಲಿದ್ದು ಕಾರ್ಯಕ್ರಮದ ಪ್ರಚಾರಾಂದೋಲನ ನ.29 ರಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ ನಡೆಯಲಿದೆ. ಕಾರ್ಯಕ್ರಮದ ಪ್ರಚಾರದ ಉದ್ದೇಶದಿಂದ ಜಿಲ್ಲೆಯ ಎಲ್ಲೆಡೆ ವಿಖಾಯ ತಂಡವು ಸ್ವಚ್ಛತಾ ಕಾರ್ಯಗಳನ್ನು ಮಾಡುವ ಮೂಲಕ ಪ್ರಚಾರ ಕಾರ್ಯದಲ್ಲಿ ತೊಡಗಲಿದೆ ಎಂದರು.
ಎಸ್‌ಕೆಎಸ್‌ಎಸ್‌ಎಫ್ ವಿಖಾಯ ಕೊಡಗು ಜಿಲ್ಲಾ ಕನ್ವೀನರ್ ಶೌಕತ್ ಹಾಜಿ, ಸಂಘಟನೆಯ ಪ್ರಮುಖರಾದ ಸಂಶುದ್ದೀನ್, ಅಯ್ಯೂಬ್ ನಲ್ವತ್ತೇಕರೆ ಸೇರಿದಂತೆ ನೆಲ್ಯಹುದಿಕೇರಿ, ಸಿದ್ದಾಪುರ, ನಲ್ವತ್ತೇಕರೆ ವ್ಯಾಪ್ತಿಯ ವಿಖಾಯ ಸಂಘಟನೆ ಪ್ರಮುಖರು ಹಾಜರಿದ್ದರು.
.