ಫಲ್ಗುಣಿಯಿಂದ ನಂದಿನಿವರೆಗೆ ರಾಶಿ ರಾಶಿ ಪ್ಲಾಸ್ಟಿಕ್ : ಒಂದೇ ಗಂಟೆಯಲ್ಲಿ 210 ಮಂದಿ ಹೆಕ್ಕಿದ್ದು 400 ಗೋಣಿ ಕಸ!

New Project (6)
Published on

ಕಟೀಲು: ಫಲ್ಗುಣಿ ನದಿಯಿಂದ ನಂದಿನಿ ನದಿಯವರೆಗೆ ಇರುವ ಹದಿನೈದು ಕಿಲೋಮೀಟರ್ ವ್ಯಾಪ್ತಿಯ ರಸ್ತೆ ಬದಿಗಳಿಂದ ಭಾನುವಾರ ಬೆಳಗ್ಗೆ 8ರಿಂದ 9ರವರೆಗಿನ ಒಂದೇ ಗಂಟೆಯಲ್ಲಿ ಸುಮಾರು 210 ಮಂದಿ ಸ್ವಯಂಸೇವಕರು ಹೆಕ್ಕಿದ್ದು ನಾಲ್ಕುನೂರು ಗೋಣಿಗಳಷ್ಟು ಪ್ಲಾಸ್ಟಿಕ್ ಕಸ!.

ಮರವೂರಿನಿಂದ ಶ್ರೀ ಕ್ಷೇತ್ರ ಕಟೀಲಿನವರೆಗೆ ರಾಜ್ಯ ಹೆದ್ದಾರಿ ಸ್ವಚ್ಛತಾ ಕಾರ್ಯವನ್ನು ಪ್ರಾಣ ಪ್ರತಿಷ್ಠಾನ ಸಂಸ್ಥೆಯ ಪೃಥ್ವಿನ್ ಹಾಗೂ ಯೋಗಚಾರ್ಯ ವಿನೋದ್ ಮಾರ್ಗದರ್ಶನದಲ್ಲಿ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಗಿತ್ತು. ಸುಮಾರು 15 ಸಂಸ್ಥೆಗಳ ಸ್ವಯಂಸೇವಕರು ಭಾಗಿಯಾಗಿ ರಾಶಿರಾಶಿ ಪ್ಲಾಸ್ಟಿಕ್ ತ್ಯಾಜ್ಯ ಹೆಕ್ಕಿದರು. ಸ್ಥಳೀಯ ಪಂಚಾಯಿತಿಗಳಿಗೆ ವಿಲೇವಾರಿಗೆ ಸಂಗ್ರಹಿಸಿದ ತ್ಯಾಜ್ಯ ಹಸ್ತಾಂತರಿಸಲಾಯಿತು.

ಮರವೂರು ನವಶಕ್ತಿ ಶಾರದೋತ್ಸವ ಸ್ವಾಗತ ಸಮಿತಿ, ಕರಂಬಾರು ನಾಗರಿಕ ಸೇವಾ ಸಮಿತಿ, ಕರಂಬಾರು ನಮ್ಮ ಜವನೆರ್, ಕಿನ್ನಿಪದವು ಗುರುಕುಲ ಬಾಲ ಸಂಸ್ಕಾರ ಕೇಂದ್ರ, ಯುವ ವಾಹಿನಿ ಬಜಪೆ ಘಟಕ, ಬಜಪೆ ಕೇಸರಿ ಆಟೋ ಫ್ರೆಂಡ್ಸ್, ಬಜಪೆ ಕೆಥೋಲಿಕ್ ಸಭಾ, ಸ್ವಾಮಿಲಪದವು ಉತ್ಸಾಹಿ ಫ್ರೆಂಡ್ಸ್ ಸರ್ಕಲ್, ರೋಟರಿ ಕ್ಲಬ್ ಬಜಪೆ, ಪೆರ್ಮುದೆ ವಿಶ್ವ ಹಿಂದು ಬಜರಂಗದಳ ಪರಶುರಾಮ ಶಾಖೆ, ಶ್ರೀ ಕೃಷ್ಣ ಸ್ನೇಹ ಬಳಗ ಧೂಮಾವತಿ ಧಾಮ, ಮುಂಡಾರು ಡಿಎಫ್‌ಸಿ, ಹೆಜಮಾಡಿ ಪರಿಸರ ಸೇವಕರು, ಜೆಸಿಐ ಬೆಳ್ಮಣ್, ಕಾರ್ಕಳ ಮೋದಿಕೇರ್ ಹೀಗೆ ನಾನಾ ಸಂಸ್ಥೆಗಳ ಸದಸ್ಯರು ಈ ಅಭಿಯಾನದಲ್ಲಿ ಕೈಜೋಡಿಸಿದ್ದರು.

ಬಜಪೆ ಪ.ಪಂ., ಪೆರ್ಮುದೆ ಮತ್ತು ಎಕ್ಕಾರ್ ಗ್ರಾಪಂ ಕಸ ವಿಲೇವಾರಿಗೆ ಸಹಕಾರ ನೀಡಿದರು. ಸ್ವಯಂಸೇವಕರಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಉಪಾಹಾರ ನೀಡಿ ಪ್ರೋತ್ಸಾಹಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net