

ದಾಬಾಸ್‌ಪೇಟೆ: ದೇಶದ ವಿವಿಧ ಭಾಗಗಳಲ್ಲಿನ ಜವಾಹರ್ ನವೋದಯ ವಿದ್ಯಾಲಯ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿ ಪ್ರಸ್ತುತ ಬೆಂಗಳೂರಿನಲ್ಲಿ ನೆಲಸಿರುವವರು ನವೋದಯನ್ಸ್ ಇನ್ ಬೆಂಗಳೂರು ಹೆಸರಿನಲ್ಲಿ ಸಂಘಟನೆ ಮಾಡಿಕೊಂಡಿದ್ದು, ಎಲ್ಲರೂ ನೆಲಮಂಗಲ ತಾಲೂಕು ದಾಬಾಸ್‌ಪೇಟೆ ಸಮೀಪದ ನಿಜಗಲ್ ಸಿದ್ಧರಬೆಟ್ಟದಲ್ಲಿ ಚಾರಣ ಕೈಗೊಂಡಿದ್ದರು. ಅಲ್ಲದೆ ಬೆಟ್ಟದಲ್ಲಿಯೇ ಸ್ವಚ್ಛತಾ ಆಂದೋಲನ ನಡೆಸಿದರು.
ಸುಮಾರು 150 ಜನ ಚಾರಣಿಗರು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3ರವರೆಗೆ ಪ್ರಸಿದ್ಧ ದೇವಸ್ಥಾನ, ದರ್ಗಾ ಹಾಗೂ ಬೆಟ್ಟದ ದಾರಿ ಸ್ವಚ್ಛಗೊಳಿಸಿ ಸುಮಾರು 40 ಮೂಟೆಗಳಷ್ಟು ಪ್ಲಾಸ್ಟಿಕ್, ಗಾಜಿನ ಬಾಟಲಿಗಳು ಹಾಗೂ ಕಸ ಸಂಗ್ರಹಿಸಿ ತೆರವು ಮಾಡಿದರು.
ಸಂಘಟನೆ ಸಂಚಾಲಕ ಡಾ.ರಾಜಶೇಖರ್ ಜಾಕ, ಒಂದೇ ಭಾರತಂ ಫೌಂಡೇಶನ್ ಸಂಸ್ಥಾಪಕರಾದ ಬಿಜ್ಜಾವರ ಲೋಕೇಶ್, ಶ್ರೀನಿಜಗಲ್ಲು ಸಿದ್ದರಬೆಟ್ಟ ದೇವಸ್ಥಾನದ ಸೇವಾ ಸಮಿತಿ(ರಿ)ಯ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣಪ್ಪ,ಸ್ಥಳೀಯರು ರವೀಶ್.ಎಚ್.ಕೆ. ಇತರರಿದ್ದರು.