

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜರಗುವ ಸ್ವಚ್ಛತೆಯೇ ಸೇವೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ನಗರಗಳನ್ನು ಸ್ವಚ್ಛವಾಗಿಡಲು ಎಲ್ಲರೂ ಕೈಜೋಡಿಸೋಣ ಎಂದು ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಮನವಿ ಮಾಡಿದರು. ದೇವನಹಳ್ಳಿ ಟೌನ್‌ನ ಪುರಸಭೆ ಮುಂಭಾಗದಲ್ಲಿ ಮಂಗಳವಾರ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಆಂದೋಲನಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.ಅವರವರ ತಾಯಿಯ ಹೆಸರಿನಲ್ಲಿ ನಗರದ ವಿವಿಧ ಬಡಾವಣೆಗಳಲ್ಲಿರುವ ಉದ್ಯಾನವನಗಳಲ್ಲಿ ಹಾಗೂ ಮನೆಯ ಸುತ್ತಮುತ್ತಲಿನಲ್ಲಿ ಒಂದು ಸಸಿಯನ್ನು ನೆಟ್ಟು ಪೋಷಿಸಿ ಪರಿಸರ ಸಂರಕ್ಷಣೆಯಲ್ಲಿ ಕೈಜೋಡಿಸಬೇಕು ಎಂದು ಕರೆ ಮಾಡಿದರು.ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಜನರಲ್ಲಿ ನೈರ್ಮಲ್ಯದ ಕುರಿತು ಅರಿವು ಮೂಡಿಸುವ ಉದ್ದೇಶದೊಂದಿಗೆ ಪ್ರತಿ ವರ್ಷವು ಸ್ವಚ್ಛತಾ ಹೀ ಸೇವಾ ಪಾಕ್ಷಿಕವನ್ನು ಆಯೋಜಿಸಲಾಗುತ್ತಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಸೆ.17 ರಿಂದ ಅ.2 ರ ವರೆಗೆ ’ಸ್ವಚ್ಛತಾ ಹೀ ಸೇವಾ ಪಾಕ್ಷಿಕ-2024 ಆಂದೋಲನ’ ಹಮ್ಮಿಕೊಳ್ಳಲಾಗಿದೆ ಎಂದರು. ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿಯಂದು ಅವರಿಗೆ ಗೌರವ ಸಲ್ಲಿಸಲು ಪ್ರತಿ ವರ್ಷ ಅ.2 ನ್ನು ಸ್ವಚ್ಛ ಭಾರತ ದಿನವನ್ನಾಗಿ ಆಚರಿಸಲಾಗುತ್ತದೆ. ಸ್ವಚ್ಛ ಭಾರತ ಅಭಿಯಾನದ 10ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಈ ಯೋಜನೆಯ ಸಾಧನೆಯ ಮೈಲಿಗಲ್ಲನ್ನು ಗೌರವಿಸಲು ಸ್ವಚ್ಛತಾ ಹೀ ಸೇವಾ (ಎಚ್‌ಎಚ್‌ಎಸ್2024) ಅಭಿಯಾನವನ್ನು ಸ್ವಭಾವ್ ಸ್ವಚ್ಛತಾ- ಸಂಸ್ಕಾರ್ ಎಂಬ ಧ್ಯೆಯದೊಂದಿಗೆ ಆಚರಿಸಲಾಗುತ್ತಿದೆ ಎಂದರು.
ಅಧಿಕಾರಿಗಳು, ಜನರ ಸಹಯೋಗ:
ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಸಾರ್ವಜನಿಕರು ಗ್ರಾಮೀಣ ಪ್ರದೇಶದಲ್ಲಿ ಸಂಪೂರ್ಣ ಸ್ವಚ್ಛತೆ ಕಾಪಾಡಿಕೊಳ್ಳಲು ಪೂರಕವಾದ ಚಟುವಟಿಕೆಗಳನ್ನು ನಡೆಸಬೇಕು, ಸ್ವಚ್ಛತಾ ಹೀ ಸೇವಾ ಆಂದೋಲನದ ಭಾಗವಾಗಿ ಪ್ರತಿ ಗ್ರಾಮಗಳಿಂದ ಹಿಡಿದು ತಾಲೂಕು ಮಟ್ಟದಲ್ಲಿ ಸ್ವಚ್ಛತಾ ಕಾರ್ಯ ನಡೆಸಬೇಕು ಸರ್ಕಾರದ ಎಲ್ಲ ಇಲಾಖಾ ಕಚೇರಿಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ವಿವಿಧ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಆಂದೋಲನದಲ್ಲಿ ಸಾರ್ವಜನಿಕರು ಹಾಗೂ ಅಧಿಕಾರಿಗಳು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ಸ್ವಚ್ಛತಾ ಕಾರ್ಯಕ್ರಮಗಳು ಹಮ್ಮಿಕೊಂಡು ಕಾರ್ಯಕ್ರಮಗಳ ಸ್ವಚ್ಛತಾ ಹೀ ಸೇವಾ ವೆಬ್‌ಸೈಟ್ ಲಿಂಕ್‌ನಲ್ಲಿ ಪೋಟೋಗಳನ್ನು ನಮೂದಿಸುವ ಆಂದೋಲನದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.