ಜಿಲ್ಲಾಸ್ಪತ್ರೆ ಆವರಣದಲ್ಲಿ ಶ್ರಮದಾನ

27 Dwd 7
Published on

ಧಾರವಾಡ: ರಾಜ್ಯಾದ್ಯಂತ ಸೆ. 25ರಿಂದ ಅ. 2ರ ಮಹಾತ್ಮಾ ಗಾಂಧಿಜಿ ಜನ್ಮದಿನದವರೆಗೆ ವಿವಿಧ ಇಲಾಖೆಗಳಲ್ಲಿ ಸ್ವಚ್ಚತಾ ಸಪ್ತಾಹ ಆಚರಿಸಲಾಗುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸೂಚನೆಯಂತೆ ಜಿಲ್ಲಾ ಶಸ್ತಚಿಕಿತ್ಸಕ ಡಾ. ಸಂಗಪ್ಪ ಗಾಬಿ ನೇತೃತ್ವದಲ್ಲಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಬುಧವಾರ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.
ಈ ವೇಳೆ ಮಾತನಾಡಿದ ಡಾ. ಗಾಬಿ, ಆಸ್ಪತ್ರೆಗಳು ಆರೋಗ್ಯ ತಾಣವಾಗಬೇಕು. ಆಸ್ಪತ್ರೆಗೆ ಆಗಮಿಸುವ ಪ್ರತಿಯೊಬ್ಬರೂ ತಮ್ಮ ಮನೆಯಂತೆ ಇಲ್ಲಿಯೂ ಸ್ವಚ್ಛತೆ ಕಾಪಾಡಬೇಕು. ಆಸ್ಪತ್ರೆಗೆ ವಿವಿಧ ರೀತಿಯ ಚಿಕಿತ್ಸೆ, ತಪಾಸಣೆ, ಔಷಧಿ, ಸಮಾಲೋಚನೆಗಾಗಿ ಪ್ರತಿದಿನ ಸರಾಸರಿ ೧ ಸಾವಿರಕ್ಕೂ ಹೆಚ್ಚು ಜನ ಭೇಟಿ ನೀಡುತ್ತಾರೆ. ರೋಗಿಗಳೊಂದಿಗೆ ಬರುವ ಸಂಬ೦ಧಿಕರು ಆಸ್ಪತ್ರೆ ಆವರಣದ ಎಲ್ಲೆಂದರಲ್ಲಿ ಕುಳಿತು ಊಟ ಮಾಡಿ ಉಳಿದ ಆಹಾರ ಪದಾರ್ಥ, ನೀರು, ಪ್ಲಾಸ್ಟಿಕ್ ಚೀಲ, ಬಾಟಲ್‌ಗಳನ್ನು ಚೆಲ್ಲುವುದರಿಂದ ಆಸ್ಪತ್ರೆ ವಾತಾವರಣ ಹಾಳಾಗುತ್ತದೆ. ಸ್ವಚ್ಛತೆ ಕಾಪಾಡಲು ಸಾರ್ವಜನಿಕರು ಸಹಕರಿಸಬೇಕು ಎಂದರು.
ವೈದ್ಯರಾದ ಡಾ. ರಾಜೇಂದ್ರ ಹಳ್ಳಿಕೇರಿ, ಡಾ. ಗೌರಿ ಬೆಲ್ಲದ, ಡಾ. ಗಿರಿಜಾ, ಡಾ. ಕವಿತಾ ಕೋರೆ, ಡಾ. ಮಹೇಶ ಚಿತ್ತರಗಿ, ರಮೇಶ ಎಚ್., ರಾಜೇಶ ಕೋನರೆಡ್ಡಿ, ಸಂಧ್ಯಾ ಭಟ್, ವಸಂತಾ ಚಟ್ಟನ್ನವರ, ಮದಿಹಾಳ ಯೋಗ ಹಿತರಕ್ಷಣಾ ಸಮಿತಿ, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ವಿನಯ ಕುಲಕರ್ಣಿ ಅಭಿಮಾನಿ ಬಳಗದ ಸದಸ್ಯರು ಹಾಗೂ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net