ವಿಪತ್ತು ನಿರ್ವಹಣೆ ತಂಡದಿಂದ ಸ್ವಚ್ಛತೆ, ಮಹಾನಗರ ಪಾಲಿಕೆಯಿಂದ ಕಾರ್ಯಾಚರಣೆ

IMG_20241012_205934_266.jpg
Published on

ಹುಬ್ಬಳ್ಳಿ: ಮಹಾನಗರದಲ್ಲಿ ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಇದರಿಂದ ಅಲ್ಲಲ್ಲಿ ಗಟಾರು, ಚರಂಡಿಗಳು ತುಂಬಿ ಹರಿದು ಅವಾಂತರ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ವತಿಯಿಂದ ಸ್ವಚ್ಛತೆ ಕಾರ್ಯ ಕೈಗೊಳ್ಳಲಾಗಿದೆ.

ನಗರದ ಹಲವು ಕಡೆಗಳಲ್ಲಿ ಮಳೆ ನೀರು ಮನೆ ಹಾಗೂ ಅಂಗಡಿ, ಮುಂಗಟ್ಟುಗಳಿಗೆ ನುಗ್ಗಿದೆ. ಮಳೆ ಬಾಧಿತ ಪ್ರದೇಶಗಳಿಗೆ ಮೇಯರ್ ರಾಮಪ್ಪ ಬಡಿಗೇರ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಳೆಯಿಂದ ಸಾರ್ವಜನಿಕರಿಗೆ ಉಂಟಾದ ತೊಂದರೆ ನಿವಾರಣೆ ಮಾಡಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿ, ಸಿಬ್ಬಂದಿಗೆ ಸೂಚನೆ ನೀಡಿದರು.

ಮಳೆ ವಿಪತ್ತು ನಿರ್ವಹಣೆ ತಂಡವು ಕಾರ್ಯಪ್ರವೃತ್ತವಾಗಿ ಮಳೆ ನೀರು ನುಗ್ಗಿದ ಪ್ರದೇಶಗಳಲ್ಲಿ ಕಾರ್ಯಾಚರಣೆ ಕೈಗೊಂಡಿತು. ಕಟ್ಟಿಕೊಂಡಿದ್ದ ನಾಲಾಗಳನ್ನು ಸ್ವಚ್ಛ ಮಾಡಿ ಸರಾಗ ಹರಿವಿಗೆ ಅವಕಾಶ ಮಾಡಿಕೊಡಲಾಯಿತು. ಜೆಸಿಬಿ ಮೂಲಕ ಎಲ್ಲ ನಾಲಾಗಳನ್ನು ಸ್ವಚ್ಛಗೊಳಿಸಲಾಯಿತು.

ಸೊಳ್ಳೆ ನಿಯಂತ್ರಣಕ್ಕೆ ನಿರಂತರ ಫಾಗಿಂಗ್ ಮಾಡಲಾಗುತ್ತಿದೆ. ಕ್ರಿಮಿನಾಶಕ ಔಷಧ ಸಿಂಪಡಣೆಯೂ ನಡೆಯುತ್ತಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಹತೋಟಿಗೆ ತರುವ ಉದ್ದೇಶದಿಂದ ಹಾಗೂ ಸೊಳ್ಳೆಗಳ ನಿಯಂತ್ರಣಕ್ಕೆ ಪಾಲಿಕೆ ಈ ಕ್ರಮ ಕೈಗೊಂಡಿದೆ.

ಡೆಂಘಿ ಹಾಗೂ ಸಾಂಕ್ರಾಮಿಕ ರೋಗದಿಂದ ಸಾರ್ವಜನಿಕರು ಹೇಗೆ ದೂರ ಇರಬೇಕೆಂದು ಮಾಹಿತಿ ನೀಡಲಾಯಿತು. ಪಾಲಿಕೆ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡಪ್ಪನವರ ನೇತೃತ್ವದಲ್ಲಿ ಪಾಲಿಕೆ ವಲಯ ಸಹಾಯಕ ಆಯುಕ್ತರು ಅವಳಿನಗರದ ಎಲ್ಲ ವಾರ್ಡ್ ಗಳಿಗೆ ಭೇಟಿ ನೀಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net