

ಹೊಳೆನರಸೀಪುರ: ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದಾಗ ನಮ್ಮ ಜೀವನವೂ ಸುಂದರವಾಗಿರುತ್ತದೆ ಎಂದು ನ್ಯಾಯಾಧೀಶ ಆರ್.ಜೆ.ಎಸ್. ಪ್ರವೀಣ್ ತಿಳಿಸಿದರು. ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಪುರಸಭೆ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು. ನ್ಯಾಯಾಧೀಶ ಸಿದ್ದರಾಮ ಮಾತನಾಡಿ, ನಿತ್ಯ ನಾವು ಪರಿಸರ, ವಾಯು, ಜಲ ಮತ್ತು ಶಬ್ದಮಾಲಿನ್ಯ ಮಾಡುತ್ತಿದ್ದೇವೆ. ಇದೇ ಧೋರಣೆ ಮುಂದುವರಿದರೆ ಮುಂದಿನ ದಶಕದಲ್ಲಿ ಯಾತನೆಗಳು ಹೆಚ್ಚಾಗಲಿವೆ.ಈಗಾಗಲೇ ನಾವು ನೀರನ್ನು ಕೊಂಡು ಕುಡಿಯುತ್ತಿದ್ದೇವೆ. ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಎಚ್ಚರ ಇಲ್ಲದಿದ್ದರೆ ಮುಂದೊಂದು ದಿನ ಶುದ್ಧ ಗಾಳಿಯನ್ನೂ ಹಣ ನೀಡಿಯೇ ಸೇವಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ವಕೀಲರ ಸಂಘದ ಅಧ್ಯಕ್ಷ ಶಿವಕುಮಾರ್, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ, ಆರೋಗ್ಯಾಧಿಕಾರಿ ವಸಂತ್, ಪರಿಸರ ಇಂಜಿನಿಯರ್ ರುಚಿದರ್ಶಿನಿ ಇದ್ದರು.