ಜಾತ್ರೆ ವೇಳೆ ಗಮನಸೆಳೆದ ಸ್ವಚ್ಛತೆ : ಕುಕ್ಕೆಯಲ್ಲಿ ಸ್ಟ್ರೀಟ್ ಸ್ವೀಪಿಂಗ್ ಮಷಿನ್‌ನಿಂದ ಶುಚಿತ್ವ : 40ಕ್ಕೂ ಅಧಿಕ ಕಾರ್ಮಿಕರ ಶ್ರಮ

New Project (12)
Published on

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಸಮಯದಲ್ಲಿ ಕ್ಷೇತ್ರ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಈ ಕಾರಣದಿಂದ ಜಾತ್ರೆ ಬಳಿಕವೂ ಕ್ಷೇತ್ರದಲ್ಲಿ ನೈರ್ಮಲ್ಯ ಕಂಡು ಬರುತ್ತಿದೆ.

ದೇವಳದ ಆಡಳಿತಾಧಿಕಾರಿ ಜುಬಿನ್ ಮೊಹಾಪಾತ್ರ ಮುತುವರ್ಜಿವಹಿಸಿ ಈ ಬಾರಿ ಮಂಗಳೂರಿನಿಂದ ಸ್ವಚ್ಛತಾ ಯಂತ್ರ ತರಿಸಿದ್ದರು. ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ರಾತ್ರಿ ವೇಳೆಯೂ ಸ್ವಚ್ಛತಾ ಕಾರ್ಯ ನಡೆಸುವ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು.

ಜಾತ್ರೋತ್ಸವದ ಪ್ರಧಾನ ದಿನಗಳಾದ ಚೌತಿ, ಪಂಚಮಿ, ಷಷ್ಠಿ ಮತ್ತು ಅವಭೃತ ದಿನ ಮತ್ತು ಲಕ್ಷದೀಪ, ಚೌತಿ, ಪಂಚಮಿ, ಷಷ್ಠಿ ದಿನ ರಥೋತ್ಸವ ಆರಂಭಕ್ಕೆ ಮೊದಲು ಮತ್ತು ರಥೋತ್ಸವದ ಬಳಿಕ ರಸ್ತೆಯನ್ನು ಸಂಪೂರ್ಣವಾಗಿ ಗುಡಿಸುವ ವ್ಯವಸ್ಥೆ ಮಾಡಲಾಗಿತ್ತು. ಕುಮಾರಧಾರಾದಿಂದ ಗೋಪುರದ ತನಕ ದಿನದಲ್ಲಿ 2 ಬಾರಿ ರಸ್ತೆಗೆ ನೀರು ಹಾಯಿಸಿ ಸ್ವಚ್ಛ ಮಾಡಲಾಗುತ್ತಿತ್ತು.

ಕ್ಷೇತ್ರದ ರಥಬೀದಿ ಸೇರಿದಂತೆ ಬೀದಿ ಉರುಳು ಸೇವೆ ಮಾಡುವ ಪಥದಲ್ಲಿ ಸ್ಟ್ರೀಟ್ ಸ್ವೀಪಿಂಗ್ ಮಷಿನ್ ಮೂಲಕ ರಸ್ತೆಯಲ್ಲಿದ್ದ ಧೂಳು-ಮಣ್ಣನ್ನು ತೆಗೆಯಲಾಗಿತ್ತು. ಇದರಿಂದಾಗಿ ಬೀದಿ ಉರುಳು ಸೇವೆ ಮಾಡುವ ಭಕ್ತರಿಗೆ ರಸ್ತೆಯಲ್ಲಿನ ಮಣ್ಣಿನ ಕಣಗಳಿಂದ ಆಗುವ ತೊಂದರೆ ತಪ್ಪಿತ್ತು.

ಕುಕ್ಕೆಯ ರಥಬೀದಿಯನ್ನು ಸ್ಟ್ರೀಟ್ ಸ್ವೀಪಿಂಗ್ ಮಷಿನ್ ಸ್ವಚ್ಛಗೊಳಿಸಿತು.
ಕುಕ್ಕೆಯ ರಥಬೀದಿಯನ್ನು ಸ್ಟ್ರೀಟ್ ಸ್ವೀಪಿಂಗ್ ಮಷಿನ್ ಸ್ವಚ್ಛಗೊಳಿಸಿತು.

ಶ್ರೀ ದೇವಳದ ಜಾತ್ರೋತ್ಸವದ ಆರಂಭಿಕ ದಿನವಾದ ನ.27ರಿಂದ ಡಿ.12ರ ತನಕ ಹೊರಭಾಗದಿಂದ ಕರೆಸಲ್ಪಟ್ಟ ಮತ್ತು ಶ್ರೀ ದೇವಳದ ಸ್ವಚ್ಛತಾ ಕಾರ್ಮಿಕರು ನಿರಂತರವಾಗಿ ಕ್ಷೇತ್ರ ಸ್ವಚ್ಛತೆ ನಡೆಸಿದ್ದಾರೆ. ಕುಕ್ಕೆ ದೇವಳದ ಆರೋಗ್ಯ ನಿರೀಕ್ಷಕ ಯೋಗೀಶ್ ಎಂ.ವಿಟ್ಲ ಮಾರ್ಗದರ್ಶನ ನೀಡಿದ್ದಾರೆ. ಸುಳ್ಯದಿಂದ 21 ಜನ ಪೌರ ಕಾರ್ಮಿಕರನ್ನು ಕರೆಸಿಕೊಳ್ಳಲಾಗಿದ್ದು, ದೇವಳದ ವತಿಯಿಂದ ನಿತ್ಯ ಶುಚಿತ್ವಕ್ಕೆ ನೇಮಕಗೊಂಡಿರುವ 19 ಕಾರ್ಮಿಕರು ಶುಚಿತ್ವ ಕಾರ್ಯದಲ್ಲಿ ಕರಜೋಡಿಸಿದ್ದರು.

ಕುಕ್ಕೆಯ ವಿವಿಧ ಸ್ಥಳಗಳಲ್ಲಿ ಮೊಬೈಲ್ ಶೌಚಗೃಹ ಅಳವಡಿಸಲಾಗಿರುವುದು.
ಕುಕ್ಕೆಯ ವಿವಿಧ ಸ್ಥಳಗಳಲ್ಲಿ ಮೊಬೈಲ್ ಶೌಚಗೃಹ ಅಳವಡಿಸಲಾಗಿರುವುದು.

40 ಮೊಬೈಲ್ ಶೌಚಗೃಹ

100ಕ್ಕೂ ಅಧಿಕ ಡಸ್ಟ್‌ಬಿನ್‌ಗಳನ್ನು ರಥಬೀದಿಯಿಂದ ಕಾಶಿಕಟ್ಟೆ ತನಕ ಇರಿಸಲಾಗಿತ್ತು. ಕ್ಷೇತ್ರದಲ್ಲಿ ಈಗಾಗಲೇ 150ಕ್ಕೂ ಅಧಿಕ ಶಾಶ್ವತ ಶೌಚಗೃಹಗಳು ವ್ಯವಸ್ಥಿತವಾಗಿವೆ. ಇದರೊಂದಿಗೆ 40 ತಾತ್ಕಾಲಿಕ ಮೊಬೈಲ್ ಶೌಚಗೃಹಗಳನ್ನು ಕುಮಾರಧಾರಾ, ಕಾಶಿಕಟ್ಟೆ, ಸವಾರಿ ಮಂಟಪ ಹಾಗೂ ಪಾರ್ಕಿಂಗ್ ಸ್ಥಳ ಹಾಗೂ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಸಮೀಪದಲ್ಲಿ ನಿರ್ಮಿಸಲಾಗಿತ್ತು. ಆರೋಗ್ಯ ಇಲಾಖೆ ಮತ್ತು ಸ್ಥಳಿಯ ಗ್ರಾಪಂ ಸಹಕಾರ ನೀಡಿದ್ದವು. ಪ್ಲಾಸ್ಟಿಕ್ ಮತ್ತು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ಜಾಗೃತಿಗೆ ಅಧಿಕಾರಿಗಳು ಅಂಗಡಿಗಳಿಗೆ ದಾಳಿ ಮಾಡಿದ್ದರು. ಅಲ್ಲಲ್ಲಿ ಸೂಚನಾ ಫಲಕ ಹಾಕಿ ಸ್ವಚ್ಛತೆ ಪಾಲಿಸಲು ಕೇಳಲಾಗಿತ್ತು.

ಸ್ವಯಂಸೇವಕರಿಂದ ಸೇವೆ

ಕುಕ್ಕೆಯ ಸ್ವಯಂಸೇವಕರು ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಸ್ವಚ್ಛತಾ ಸೇವೆ ನಡೆಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 400ಕ್ಕೂ ಅಧಿಕ ಸ್ವಯಂಸೇವಕರು ಲಕ್ಷದೀಪೋತ್ಸವದ ಮೊದಲ ದಿನ ಕುಮಾರಧಾರಾದಿಂದ ಗೋಪುರದ ತನಕ ರಸ್ತೆ ಗುಡಿಸಿ ಬೀದಿ ಮಡೆಸ್ನಾನ ಮಾಡುವ ಭಕ್ತರಿಗೆ ಅನುಕೂಲ ಮಾಡಿದ್ದರು. ದೇವಳದ ಸಿಬ್ಬಂದಿ ವರ್ಗವೂ ಉರುಳು ಸೇವೆ ಪಥವನ್ನು ಗುಡಿಸಿ ನಿರ್ಮಲಗೊಳಿಸಿತ್ತು.

ಕುಕ್ಕೆ ಜಾತ್ರಾ ವೇಳೆ ಸ್ವಚ್ಛತೆಗೆ ಗರಿಷ್ಠ ಆದ್ಯತೆ ನೀಡಲಾಗಿತ್ತು. ಬೀದಿ ಸ್ವಚ್ಛತೆಗೆ ಮಂಗಳೂರು ಮಹಾನಗರಪಾಲಿಕೆಯಿಂದ ಸ್ಟ್ರೀಟ್ ಸ್ವೀಪಿಂಗ್ ಮಷಿನ್ ತರಿಸಲಾಗಿತ್ತು. ಸ್ವಚ್ಛ ಕುಡಿಯುವ ನೀರನ್ನು ಭಕ್ತರಿಗೆ ಒದಗಿಸಲು ಕ್ರಮ ಕೈಗೊಳ್ಳಲಾಗಿತ್ತು. 40ಕ್ಕೂ ಅಧಿಕ ತಾತ್ಕಾಲಿಕ ಮೊಬೈಲ್ ಶೌಚಗೃಹ ನಿರ್ಮಿಸಲಾಗಿತ್ತು. ಜುಬಿನ್ ಮೊಹಾಪಾತ್ರಾ, ಆಡಳಿತಾಧಿಕಾರಿಗಳು ಜಾತ್ರಾ ವೇಳೆ ನಿರಂತರ ಶುಚಿತ್ವ ಕಾಪಾಡಲಾಗಿತ್ತು. ಬೀದಿ ಉರುಳು ಸೇವೆ ಪಥ ಸೇರಿದಂತೆ ಕ್ಷೇತ್ರಾದ್ಯಂತ 40ಕ್ಕೂ ಅಧಿಕ ಸ್ವಚ್ಛತಾ ಕಾರ್ಮಿಕರು ಶ್ರಮಿಸಿದ್ದಾರೆ. ಭಕ್ತರಿಗೆ ನೈರ್ಮಲ್ಯಯುತ ವಾತಾವರಣ ಸೃಷ್ಟಿಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ದೇವಳದಿಂದ ಮಾಡಲಾಗಿತ್ತು. ಸ್ವಚ್ಛತಾ ಕಾರ್ಯದ ಬಗ್ಗೆ ನಿರಂತರ ಪರಿಶೀಲನೆ ನಡೆಸಲಾಗುತ್ತಿದ್ದು, ಕ್ಷೇತ್ರಾದ್ಯಂತ ಅಲ್ಲಲ್ಲಿ ಸೂಚನಾ ಫಲಕ ಹಾಕಿ ಭಕ್ತರಲ್ಲಿ ಜಾಗೃತಿ ಮೂಡಿಸಲಾಗಿದೆ. ಅರವಿಂದ ಅಯ್ಯಪ್ಪ ಸುತಗುಂಡಿ, ಕಾರ್ಯನಿರ್ವಹಣಾಧಿಕಾರಿ https://www.vijayavani.net/suicide-26 https://www.vijayavani.net/congress-19

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net