

ಲಿಂಗದಹಳ್ಳಿ: ಕಲ್ಲತ್ತಿಪುರ ಗ್ರಾಮಸ್ಥರಿಗೆ ನೇರವಾಗಿ ಕಲ್ಲತ್ತಿಗಿರಿಯಿಂದ ಬರುವ ನೀರನ್ನು ಪೂರೈಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಗಡ ಗ್ರಾಪಂ ಪಿಡಿಒ ಟಿ.ಶಿವಮೂರ್ತಿ ಹೇಳಿದರು.
ಕಲ್ಲತ್ತಿಪುರ ಗ್ರಾಮಸ್ಥರಿಗೆ ಕಳೆದ ಅನೇಕ ದಿನಗಳಿಂದ ಕಲುಷಿತ ನೀರನ್ನು ಬಳಸುತ್ತಿರುವ ಬಗ್ಗೆ ಮಾ.11ರಂದು ವಿಜಯವಾಣಿ ವಿಶೇಷ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಗ್ರಾಪಂ ಅಧಿಕಾರಿಗಳು, ಜನ ಪ್ರತಿನಿಧಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಕುಡಿಯುವ ನೀರಿಗೆ ಬಳಸುತ್ತಿದ್ದ ಶಿಥಿಲ ತೊಟ್ಟಿ ಸಂಪರ್ಕವನ್ನು ತಪ್ಪಿಸಿ ನೇರವಾಗಿ ಕಲ್ಲತ್ತಿಗಿರಿಯಿಂದ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ.
ಗ್ರಾಮಸ್ಥರಿಗೆ ಕುಡಿಯುವ ನೀರನ್ನು ಒದಗಿಸಲು ನಿರ್ಮಿಸಿದ್ದ ನೀರು ಸಂಗ್ರಹ ತೊಟ್ಟಿ ದುರಸ್ತಿ ಮಾಡಲು ಸಾಧ್ಯವಾಗದಷ್ಟು ಶಿಥಿಲವಾಗಿದೆ. ಗ್ರಾಮಸ್ಥರ ಸಲಹೆ ಪಡೆದು ಬೇರೆ ಸ್ಥಳದಲ್ಲಿ ನೀರು ಸಂಗ್ರಹ ತೊಟ್ಟಿ ನಿರ್ಮಿಸುವವರೆಗೂ ನೇರವಾಗಿ ನೀರನ್ನು ಗ್ರಾಮಸ್ಥರಿಗೆ ಸರಬರಾಜು ಮಾಡಲಿದ್ದು ಮಳೆಗಾಲಕ್ಕೂ ಮುಂಚೆ ಹೊಸ ತೊಟ್ಟಿಯ ನಿರ್ಮಾಣ ಕಾಮಗಾರಿ ಮುಗಿಸಲಾಗುವುದು ಎಂದು ತಿಳಿಸಿದರು.
ತಿಗಡ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಆರ್.ಮುರುಗ ಮತ್ತಿತರರಿದ್ದರು.