

ಮೊಳಕಾಲ್ಮೂರು: ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚಿನ ಫ್ಲೋರೈಡ್ ಅಂಶದ ನೀರಿದ್ದು, ಜನರ ಆರೋಗ್ಯದ ಹಿತದೃಷ್ಟಿಯಿಂದ ಶುದ್ಧ ನೀರಿನ ಘಟಕಗಳ ಸಮರ್ಪಕ ಸೇವೆಗೆ ಅಧಿಕಾರಿಗಳು ಆದ್ಯತೆ ನೀಡಬೇಕು ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.
ಮೊಳಕಾಲ್ಮೂರಿನ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಶಿಕ್ಷಣ, ಆರೋಗ್ಯ ಹಾಗೂ ಶುದ್ಧ ಕುಡಿವ ನೀರು ಸಮರ್ಪಕ ಲಭ್ಯತೆ ವಿಷಯದಲ್ಲಿ ಅಧಿಕಾರಿಗಳು ದೂರು ಬಾರದಂತೆ ಜಾಗೃತರಾಗಿ ಕಾರ್ಯನಿರ್ವಹಿಸಬೇಕು ಎಂದರು.
ಗ್ರಾಮೀಣ ಭಾಗದಲ್ಲಿ ಆರ್‌ಒ ಪ್ಲಾಂಟ್‌ಗಳು ಕೆಟ್ಟು ಹಲವು ತಿಂಗಳು ಕಳೆದಿವೆ. ಅವನ್ನು ಸರಿಪಡಿಸಲು ನಿರ್ವಹಣೆ ಹೊತ್ತ ಏಜೆನ್ಸಿಯವರು ಕಡೆಗಣಿಸಿದಲ್ಲಿ ಅಂಥವರ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಜಿಲ್ಲಾಡಳಿತಕ್ಕೆ ಪತ್ರ ಬರೆಯಬೇಕು ಎಂದು ಸ್ಥಳೀಯ ಅಧಿಕಾರಿಗಳನ್ನು ಎಚ್ಚರಿಸಿದರು.
ಸಾರ್ವಜನಿಕ ಸೇವೆಗಳಾದ ಸಮುದಾಯ ಭವನ, ಅಂಗನವಾಡಿ ಹಾಗೂ ಶಾಲಾ ತರಗತಿ ಕೊಠಡಿಗಳ ಹೊಸ ಕಟ್ಟಡ ಅಥವಾ ದುರಸ್ತಿ ಕಾರ್ಯದಲ್ಲಿ ವಿಳಂಬ ಮಾಡುವಂತಿಲ್ಲ. ಕಾಲಮಿತಿಯಲ್ಲಿ ಕೆಲಸ ಪೂರ್ಣಕ್ಕೆ ಅಧಿಕಾರಿಗಳು ಜಾಗೃತಿ ವಹಿಸಬೇಕು. ಉದಾಸೀನ ಕಂಡು ಬಂದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಬಿಇಒ ನಿರ್ಮಲಾದೇವಿ ಮಾತನಾಡಿ, ತಾಲೂಕಿನಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 303 ಕಾಯಂ ಶಿಕ್ಷಕರ ಕೊರತೆ ಇದೆ. ತಾತ್ಕಾಲಿಕವಾಗಿ 150 ಅತಿಥಿ ಶಿಕ್ಷಕರ ನೇಮಕವಾಗಿದ್ದು ಪರಿಸ್ಥಿತಿ ಸ್ಪಲ್ಪ ಮಟ್ಟಿಗೆ ಸುಧಾರಿಸಿದೆ ಎಂದರು.
ಅತ್ಯಂತ ಹಿಂದುಳಿದ ತಾಲೂಕಿನ ಮಕ್ಕಳ ಶಿಕ್ಷಣದ ಸಬಲೀಕರಣಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡುವಂತೆ ಜಿಲ್ಲಾಡಳಿತಕ್ಕೆ ಪತ್ರ ಬರೆಯಿರಿ ನಾನು ಕೂಡ ಶಿಫಾರಸು ಮಾಡುತ್ತೇನೆ ಎಂದ ಶಾಸಕರು, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ತರಗತಿ ಕೊಠಡಿಗಳ ಲಭ್ಯತೆಗೆ ನಮ್ಮ ಅನುದಾನದಲ್ಲಿ ಹೆಚ್ಚಿನ ನೆರವು ನೀಡಲಾಗಿದೆ ಎಂದು ಹೇಳಿದರು.
ಜೆಜೆಎಂ ಯೋಜನೆಯಡಿ ಪ್ರತಿ ಮನೆಗೆ ಶುದ್ಧ ಕುಡಿವ ನೀರಿನ ನಳ ಸಂಪರ್ಕ ಕಾಮಗಾರಿ ಆಮೆಗತಿಯಲ್ಲಿದೆ ಎಂಬ ದೂರಿದೆ. ಸಬೂಬು ಹೇಳದೆ ಕಾಲ ಮಿತಿಯಲ್ಲಿ ಪೂರ್ಣಗೊಳಿಸಬೆಕೆಂದು ಇಂಜಿನಿಯರ್ ಹರಿಶ್ಚಂದ್ರ ಅವರಿಗೆ ಎಚ್ಚರಿಕೆ ನೀಡಿದರು.
ಅಂಗನವಾಡಿ ಕೇಂದ್ರಗಳಲ್ಲಿ ಕಳಪೆ ಆಹಾರ ಕೊಡುತ್ತಿರುವ ಆಪಾದನೆ ಇದೆ. ಅದನ್ನು ಸರಿಪಡಿಸಲು ಗುಣಮಟ್ಟದ ಆಹಾರ ಪದಾರ್ಥಗಳ ಸರಬರಾಜು ಅವಧಿಯಲ್ಲಿ ಖುದ್ದು ಪರಿಶೀಲಿಸಬೇಕು ಎಂದು ಸಿಡಿಪಿಒ ಅವರಿಗೆ ತಾಕೀತು ಮಾಡಿದರು.
ರಸ್ತೆ, ಚರಂಡಿ ಅಥವಾ ಇನ್ನಾವುದೇ ಕಾಮಗಾರಿ ಕೆಲಸಗಳಿಗೆ ನೇರ ಅನುದಾನ ಪಡೆಯಲು ಮುಗಿಬೀಳುವ ಗುತ್ತಿಗೆದಾರರು ನರೇಗಾ ಯೋಜನೆ ಜಂಟಿ ಕೆಲಸ ಎಂದಾಗ ಹಿಂದೆ ಸರಿಯುತ್ತಿದ್ದಾರೆ. ಇದರಿಂದ ಐದಾರು ಅಂಗನವಾಡಿ ಕಟ್ಟಡಗಳು ಒಂದು ವರ್ಷದಿಂದ ನನೆಗುದಿಗೆ ಬಿದ್ದಿವೆ. ಮಕ್ಕಳ ಹಿತದೃಷ್ಟಿಯಿಂದ ನಿರ್ಮಿತಿ ಕೇಂದ್ರ ಅಥವಾ ಭೂಸೇನಾ ನಿಗಮದವರಿಗೆ ಕಾಮಗಾರಿ ವಹಿಸಲು ಕ್ರಮವಹಿಸಿ ಎಂದು ಸೂಚಿಸಿದರು.