

ಕಲಘಟಗಿ: ತಾಲೂಕಿನ ಪ್ರತಿ ಗ್ರಾಮದಲ್ಲಿ ಕುಡಿಯುವ ನೀರು ಪೂರೈಸುವ ಟ್ಯಾಂಕ್ ಅನ್ನು ಕಾಲ ಕಾಲಕ್ಕೆ ಸ್ವಚ್ಛಗೊಳಿಸಬೇಕು ಎಂದು ಜಿಲ್ಲಾ ಲೋಕಾಯುಕ್ತ ಇನ್ಸ್ಪೆಕ್ಟರ್ ಪ್ರಭು ಲಿಂಗಯ್ಯ ಹಿರೇಮಠ ಪಿಡಿಒಗಳಿಗೆ ಸೂಚಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಹಮ್ಮಿ ಕೊಂಡಿದ್ದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು. ಸರ್ಕಾರಿ ಅಂಗನವಾಡಿ, ಶಾಲೆ, ಕಚೇರಿ ಹಳೆಯ ಕಟ್ಟಡ ಬಾಳಿಕೆ ಬಂದಷ್ಟು ದಿನ ಸಂರಕ್ಷಣೆ ಮಾಡಬೇಕು. ಅನುದಾನ ಅವಶ್ಯಕತೆ ಇದ್ದ ಕಡೆ ಮಾತ್ರ ಸದ್ಬಳಕೆ ಮಾಡಿ ಅನವಶ್ಯಕವಿದ್ದಲ್ಲಿ ಅನುದಾನ ಹಾಕಿ ವ್ಯರ್ಥ ಮಾಡಬೇಡಿ ಎಂದು ತಿಳಿಸಿದರು.
ಸಿಡಿಪಿಒ ಕಚೇರಿ ಕುರಿತು ಸಾರ್ವ ಜನಿಕರಿಂದ ಸಾಕಷ್ಟು ಅಹವಾಲುಗಳು ಗಮನಕ್ಕೆ ಬಂದಿವೆ. ಅಧಿಕಾರಿಗಳು ಕೂಡಲೇ ಎಚ್ಚೆತ್ತು ಕಾರ್ಯ ನಿರ್ವಹಿಸ ಬೇಕು. ಇಲ್ಲವಾದಲ್ಲಿ ಸೂಕ್ತ ಕ್ರಮ ಜರುಗಿಸ ಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಳೆದ 6 ತಿಂಗಳಿಂದ ಕಾರ್ವಿುಕ ಇಲಾಖೆಯಲ್ಲಿ ಕಿಟ್ ವಿತರಣೆ, ಹಾಗೂ ಎಜೆಂಟರ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರತ್ತ ಮೊದಲು ಗಮನಹರಿಸಿ ಎಷ್ಟು ಗುತ್ತಿಗೆದಾರ ನೌಕರರ ಕುರಿತು ಮಾಹಿತಿ ಒದಗಿಸಬೇಕು ಎಂದರು.
ಪಟ್ಟಣ ಪಂಚಾಯಿತಿಗೆ ಒಳಪಡುವ ವಾಣಿಜ್ಯ ಮಳಿಗೆಗಳು ಎಷ್ಟು, ತಿಂಗಳ ಬಾಡಿಗೆ, ಎಷ್ಟು ವರ್ಷದಿಂದ ಬಾಡಿಗೆದಾರರು ಇದ್ದಾರೆ ಎಂಬ ಸಂಪೂರ್ಣ ಮಾಹಿತಿ ಸಲ್ಲಿಸುವಂತೆ ಸೂಚಿಸಿದರು. ಉಪ ನೋಂದಣಿ ಕಚೇರಿಯಲ್ಲಿ ಏಜೆಂಟರ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಸಂಗ್ರಾಮ ಸೇನೆ ಸಂಘಟನೆಯಿಂದ ಪಟ್ಟಣದಲ್ಲಿ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ಸಲ್ಲಿಸಿದರು.
ಸಂಗ್ರಾಮ ಸೇನೆ ತಾಲೂಕಾಧ್ಯಕ್ಷ ಸಾತಪ್ಪ ಕುಂಕೂರ ಮಾತನಾಡಿ, ಕಚೇರಿಯಲ್ಲಿ ಸರ್ಕಾರಿ ಅಧಿಕಾರಿಗಳು ಯಾರು, ಏಜೆಂಟರು ಯಾರು ಎಂಬುದು ಗೊತ್ತಾಗುತ್ತಿಲ್ಲ. ಇದು ಜನರಿಗೆ ಗೊಂದಲದ ಗುಡಾಗಿ ಪರಿಣಮಿಸಿದೆ ಕೂಡಲೇ ತಡೆಗಟ್ಟಬೇಕು ಎಂದು ಒತ್ತಾಯಿಸಿದರು. ಲೋಕಾಯುಕ್ತ ಇನ್ಸ್ಪೆಕ್ಟರ್ ಲಖನ್ ಮಸಕುಪ್ಪಿ, ಸಿಪಿಐ ಶ್ರೀಶೈಲ ಕೌಜಲಗಿ, ಇತರರಿದ್ದರು.