ಕ್ಲೀನ್ ಸ್ವಾಮಿಯ 50 ಡಿನೋಟಿಫಿಕೇಷನ್ ಪ್ರಕರಣ ಬಿಚ್ಚಿಡುವೆ: ಡಿ.ಕೆ.ಶಿವಕುಮಾರ ಗುಡುಗು

mysore
Published on

ಮೈಸೂರು: ಕ್ಲೀನ್ ಸ್ವಾಮಿ ಅಂತೆ. ಆದರೆ. ಅವರ ವಿರುದ್ಧ 50 ಡಿನೋಟಿಫಿಕೇಷನ್ ಪ್ರಕರಣ ಇವೆಯಂತೆ. ಅವುಗಳೆಲ್ಲವನ್ನೂ ಬಿಚ್ಚಿಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹರಿಹಾಯ್ದರು.


ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿ, ಕುಮಾರಸ್ವಾಮಿ ಬಹಳ ಕ್ಲೀನ್ ಸ್ವಾಮಿಯಂತೆ. ಅವರ ವಿರುದ್ಧ ಡಿನೋಟಿಫಿಕೇಶನ್ ಪ್ರಕರಣಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲವನ್ನು ಹೊರಗೆ ತರುತ್ತೇನೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಪ್ರಕರಣದಲ್ಲಿ ವಿಚಾರಣೆ ನಡೆಸಲು ಲೋಕಾಯುಕ್ತದವರು ರಾಜ್ಯಪಾಲರಿಗೂ ಪತ್ರ ಬರೆದಿದ್ದಾರಂತೆ. ಆದರೆ ಕುಮಾರಸ್ವಾಮಿ ಯೂಟರ್ನ್ ಮಾಡಿಕೊಂಡು ಈಗ ಬಿಜೆಪಿ ಮೊರೆಹೋಗಿದ್ದಾರೆ ಎಂದು ಕುಟುಕಿದರು.


ಕಾಂಗ್ರೆಸ್ ಸರ್ಕಾರವನ್ನು ಅಲ್ಲಾಡಿಸಬಹುದು ಎಂಬುದು ನಿಮ್ಮ ಭ್ರಮೆ. ಯಾವುದೇ ಕಾರಣಕ್ಕೂ ಇದು ಸಾಧ್ಯವಿಲ್ಲ. ಮುಂದಿನ 10 ತಿಂಗಳಲ್ಲ, ಮುಂದಿನ 10 ವರ್ಷ ಈ ಸರ್ಕಾರವನ್ನು ಮುಟ್ಟಲು ಸಾಧ್ಯವಿಲ್ಲ ಎಂದು ಅಬ್ಬರಿಸಿದರು.


ಜೆಡಿಎಸ್‌ನಲ್ಲಿ ಯಾರನ್ನೂ ಬೆಳೆಯಲು ಬಿಡಲಿಲ್ಲ. ಡಿಸಿಎಂ ಆಗಿದ್ದ ಸಿದ್ದರಾಮಯ್ಯ ಅವರನ್ನು ಬಿಡಲಿಲ್ಲ. ದೇವೇಗೌಡರು ಪ್ರಧಾನಿಯಾಗಿದ್ದಾಗ ಅವರ ಪಕ್ಷದಲ್ಲಿ 17 ಸಂಸದರಿದ್ದರು. ಅವರಲ್ಲಿ ಯಾರೊಬ್ಬರೂ ಈಗ ಅವರೊಂದಿಗೆ ಇಲ್ಲ. ತಮ್ಮ ಮಕ್ಕಳಿಗೆ ರಾಜಕೀಯ ದಾರಿ ಮಾಡಿಕೊಡಲು ಕುಮಾರಸ್ವಾಮಿ ಅವರು ಜೆಡಿಎಸ್ ನಾಯಕರನ್ನು ಪಕ್ಷದಿಂದ ಹೊರಹಾಕಿದ್ದಾರೆ.

ಇದು ಜನತಾದಳದ ಇತಿಹಾಸ. ಕೊನೆಗೆ ತನ್ನ ಮಗನಿಗೆ ರಾಜಕೀಯ ಸ್ಥಾನಮಾನ ಸಿಗುತ್ತಿಲ್ಲ ಎಂದು ಅಣ್ಣನ ಮಗನ ವಿರುದ್ಧವೇ ಪಿತೂರಿ ಮಾಡಿ ಅವನ ಮೇಲೂ ಕೇಸ್ ದಾಖಲಾಗುವಂತೆ ಮಾಡಿದ್ದಾರೆ. ಅಂತಹವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನನ್ನನ್ನು ಬಿಡುತ್ತಾರಾ? ಎಂದು ಪ್ರಶ್ನಿಸಿದರು.


ಈ ಹಿಂದೆ ಮಾಜಿ ಸಿಎಂ ಯಡಿಯೂರಪ್ಪನವರಿಗೆ ಅಧಿಕಾರ ನೀಡದೆ ಬೆನ್ನಿಗೆ ಚೂರಿ ಹಾಕಿದವರು ಯಾರು? ಕುಮಾರಸ್ವಾಮಿಯೇ ಹೊರತು ಕಾಂಗ್ರೆಸಿಗರಲ್ಲ ಎಂದು ವಾಗ್ದಾಳಿ ನಡೆಸಿದರು.


ಬಿಜೆಪಿ ರಾಜ್ಯಾಧ್ಯಕ್ಷ ವಿ.ವೈ.ವಿಜಯೇಂದ್ರ ನಿಮ್ಮ ತಂದೆ 2 ಸಾರಿ ರಾಜೀನಾಮೆ ಕೊಟ್ಟಿದ್ದೇಕೆ? ಎಂದು ಲೆಕ್ಕ ಕೊಡು. ನಾಳೆ ನೀನು ಮೈಸೂರಿಗೆ ಬಂದು ಸಭೆ ಮಾಡುವಾಗ ಲಕ್ಷ್ಮೀ ವಿಲಾಸ್ ಬ್ಯಾಂಕ್‌ನಿಂದ ವಿದೇಶಕ್ಕೆ ಆರ್‌ಟಿಜಿಎಸ್ ಮಾಡಿದ್ದೀಯಲ್ಲಾ, ಅದು ಏಕೆ? ನಿಮ್ಮ ತಂದೆ ಕಣ್ಣೀರು ಹಾಕಿದ್ದು ಏಕೆ? ಎಂಬುದಕ್ಕೆ ಉತ್ತರಿಸಬೇಕು ಎಂದು ಸವಾಲು ಹಾಕಿದರು.


ವಿಪಕ್ಷ ನಾಯಕ ಅಶೋಕ, ವಿಜಯೇಂದ್ರ, ಕುಮಾರಸ್ವಾಮಿ ನಿಮಗೆ ಸಿದ್ದರಾಮಯ್ಯನವರಿಂದ ರಾಜೀನಾಮೆ ಬೇಕಾ? ಈ ಬಂಡೆ ಸಿದ್ದರಾಮಯ್ಯನ ಜತೆ ಇದೆ. ಈ ಬಂಡೆ ಜತೆ 135 ಶಾಸಕರೂ ಇದ್ದಾರೆ. ಕೋಟ್ಯಂತರ ಜನ ಸಿದ್ದರಾಮಯ್ಯನವರ ಜತೆಗಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಳ್ಳಿ ಎಂದು ಎಚ್ಚರಿಸಿದರು.

ಮಿಸ್ಟರ್ ಅಶೋಕ್, ಮಿಸ್ಟರ್ ವಿಜಯೇಂದ್ರ ...:


ಮಿಸ್ಟರ್ ಅಶೋಕ್, ಮಿಸ್ಟರ್ ವಿಜಯೇಂದ್ರ ನೀವು ಆಪರೇಷನ್ ಕಮಲದ ಮೂಲಕ ಈ ಹಿಂದೆ ಅನೇಕ ಸರ್ಕಾರ ತೆಗೆದಿದ್ದೀರಿ. ಮಿಸ್ಟರ್ ಕುಮಾರಸ್ವಾಮಿ, ನಿನ್ನ ನಾಯಕತ್ವದಲ್ಲಿ ಕೇವಲ 19 ಸೀಟ್‌ಗಳನ್ನು ಗೆದ್ದಿದ್ದೀರಿ. ನಾವು 136 ಸೀಟು ಗೆದ್ದಿದ್ದೇವೆ. ಬಡವರ ಶಕ್ತಿಯಿಂದ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್, ನಮ್ಮ ಸರ್ಕಾರವನ್ನು ಎಷ್ಟೇ ಕುತಂತ್ರ ಮಾಡಿದರೂ ಅಳಿಸಲು ಸಾಧ್ಯವಿಲ್ಲ ಎಂದು ಕುಟುಕಿದರು.


ಮುಡಾ ಹಗರಣ ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಸಿಎಂ ರಾಜೀನಾಮೆ ಕೇಳುತ್ತಿರುವುದು ಅನೈತಿಕವಾದುದು. ಯಾರು ರಾಜೀನಾಮೆ ನೀಡಬೇಕು ಎಂದು ಕಾಲ ತೀರ್ಮಾನ ಮಾಡುತ್ತದೆ ಎಂದೂ ಸೂಚ್ಯವಾಗಿ ಹೇಳಿದರು.


ಹಿಂದುಳಿದ ವರ್ಗದ ನಾಯಕ ಮುಖ್ಯಮಂತ್ರಿಯಾಗಿರುವುದನ್ನು ಸಹಿಸಲಾಗದೆ ಬಿಜೆಪಿ, ಜೆಡಿಎಸ್ ನಾಯಕರು ಅವರ ವಿರುದ್ಧ ಸಂಚು ರೂಪಿಸುತ್ತಿದ್ದಾರೆ. ಇದು ಅವರಿಂದ ಸಾಧ್ಯವಿಲ್ಲ. ಮುಡಾ ವಿಷಯದಲ್ಲಿ ಯಾವುದೇ ತಪ್ಪಾಗಿಲ್ಲ. ಬಿಜೆಪಿ ಸರ್ಕಾರದಲ್ಲಿ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಪರಿಹಾರವಾಗಿ ನಿವೇಶನ ನೀಡಲಾಗಿದೆಯೇ ಹೊರತು, ಸಿದ್ದರಾಮಯ್ಯ, ಭೈರತಿ ಸುರೇಶ್ ಅಧಿಕಾರದಲ್ಲಿ ಇದ್ದಾಗ ಆಗಿಲ್ಲ. ಬಿಜೆಪಿ ನಾಯಕರ ತಟ್ಟೆಯಲ್ಲಿ ಹೆಗ್ಗಣಗಳಿವೆ ಎಂದು ಎಚ್ಚರಿಸಿದರು.


ಸಿಎಂ ಪತ್ನಿ ಎಂದೂ ಅಧಿಕಾರ ದುರ್ಬಳಕೆ ಮಾಡಿಕೊಂಡಿಲ್ಲ. ಎಂದಿಗೂ ಸಾರ್ವಜನಿಕವಾಗಿ ಕಾಣಿಸಿಕೊಂಡವರಲ್ಲ. ಅಂತಹ ಹೆಣ್ಣಿನ ಬಗ್ಗೆ ಅಧಿಕಾರ ದುರುಪಯೋಗದ ಆರೋಪ ಮಾಡುತ್ತಿರಲ್ಲ ಇದು ಸರಿಯೇ? ನಿಮ್ಮ ಈ ಪಾಪವನ್ನು ಸಿಎಂ, ಅವರ ಪತ್ನಿ ಕ್ಷಮಿಸಿದರೂ ಬೆಟ್ಟದ ಮೇಲಿರುವ ತಾಯಿ ಚಾಮುಂಡೇಶ್ವರಿ ಕ್ಷಮಿಸುವುದಿಲ್ಲ ಎಂದು ಹೇಳಿದರು.

ವಿಡಿಯೋ ಪ್ರಸಾರ:

ಡಿ.ಕೆ.ಶಿವಕುಮಾರ್ ಅವರ ಭಾಷಣ ಮಧ್ಯೆ ಜೆಡಿಎಸ್-ಬಿಜೆಪಿ ಹಳೇ ಹೇಳಿಕೆಗಳ ವಿಡಿಯೋಗಳನ್ನು ಪ್ರಸಾರ ಮಾಡಲಾಯಿತು. ಇದನ್ನು ವೀಕ್ಷಿಸಿದ ಜನರು ಕೇಕೆ ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net