

ಕೊಪ್ಪಳ: ಜಿಲ್ಲಾದ್ಯಂತ ಗ್ರಾಮೀಣ ಹಾಗೂ ನಗರ, ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಶುದ್ಧ ಕುಡಿವ ನೀರು ಪೂರೈಕೆಗೆ ಕ್ರಮ ಮಹಿಸುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ: ಶುದ್ಧ ಕುಡಿವ ನೀರಿನ ಘಟಕ ಶೀಘ್ರ ಆರಂಭ
ಜಿಲ್ಲಾಡಳಿತ ಭವನದ ಕೆಎಸ್-1 ಸಭಾಂಗಣದಲ್ಲಿ ಶುಕ್ರವಾರ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿ, ಕುಡಿವ ನೀರು ಸಂಗ್ರಹ ಮೂಲಗಳನ್ನು ಸ್ವಚ್ಛಗೊಳಿಸಿ. ಪೈಪ್‌ಲೈನ್ ಲೀಕೇಜ್ ಸರಿಪಡಿಸಿ. ಯಾವುದೇ ಅಶುದ್ಧ ನೀರು ಕುಡಿವ ನೀರಿನೊಂದಿಗೆ ಬೆರೆಯದಂತೆ ನೋಡಿಕೊಳ್ಳಿ. ಯುದ್ಧೋಪಾದಿಯಲ್ಲಿ ಈ ಕೆಲಸ ಮಾಡಬೇಕು ಎಂದರು.
ಈ ಹಿಂದಿನ ಸಭೆಗಳಲ್ಲಿ ನೀಡಿದ ನಿರ್ದೇಶನಗಳನ್ನು ಚಾಚೂ ತಪ್ಪದೆ ಪಾಲಿಸಿ. ಲೋಪದೋಷಗಳು ಆಗದಂತೆ ನೋಡಿಕೊಳ್ಳಿ. ಮುಂಗಾರು ಆರಂಭವಾಗಿದ್ದು, ಕುಡಿವ ನೀರಿನಲ್ಲಿ ಕಲುಷಿತ ನೀರು ಸೇರುವ ಸಾಧ್ಯತೆ ಹೆಚ್ಚು. ಇದರಿಂದ ಕಾಲರಾ, ಆಮಶಂಕೆಯಂಥ ರೋಗಗಳು ಬಹುಬೇಗನೆ ಹರಡುತ್ತವೆ.
ತಾಲೂಕು ಮಟ್ಟದಲ್ಲಿ ಆರೋಗ್ಯಾಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಆರೋಗ್ಯ ಜಾಗೃತಿ ಮೂಡಿಸಿ. ಶಿಬಿರ ಹಮ್ಮಿಕೊಂಡು ಜನರಿಗೆ ಅಗತ್ಯ ಔಷಧ ವಿತರಿಸುವಂತೆ ತಾಕೀತು ಮಾಡಿದರು.
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಶುದ್ಧ ಕುಡಿವ ನೀರು ನಿರಂತರವಾಗಿ ಪೂರೈಸಿ. ಆಗಾಗ ನೀರು ಸಂಗ್ರಹಗಾರಗಳನ್ನು ಸ್ವಚ್ಛಗೊಳಿಸಿ. ನೀರಿನ ಗುಣಮಟ್ಟ ಪರಿಶೀಲಿಸಬೇಕು. ಯೋಗ್ಯ ನೀರು ಮಾತ್ರ ಪೂರೈಸಿ. ಗ್ರಾಪಂ, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿಬೇಕೆಂದರು.
ಸಹಾಯಕ ಆಯುಕ್ತ ಬಸವಣ್ಣಪ್ಪ ಕಲಶೆಟ್ಟಿ, ಜಿಪಂ ಉಪ ಕಾರ್ಯದರ್ಶಿ ಸಮೀರ್ ಮುಲ್ಲಾ, ಮುಖ್ಯಲೆಕ್ಕಾಧಿಕಾರಿ ಅಮಿನ್ ಅತ್ತಾರ ಹಾಗೂ ತಹಸೀಲ್ದಾರ್‌ಗಳು ಮತ್ತು ತಾಪಂ ಇಒಗಳು, ಆರೋಗ್ಯಾಧಿಕಾರಿಗಳಿದ್ದರು.
ಜಿಲ್ಲೆಯಲ್ಲಿ ವಾಂತಿ-ಭೇದಿ ಪ್ರಕರಣಗಳು ವರದಿಯಾದ ಪ್ರದೇಶಗಳಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರಗಳನ್ನು ಆರಂಭಿಸಲಾಗಿದೆ. 8 ಕಡೆ ಕ್ಲಿನಿಕ್ ಆರಂಭಿಸಿದ್ದು, ಹಗಲು-ರಾತ್ರಿ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಆ್ಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಜನರಿಗೆ ಒಆರ್‌ಎಸ್ ವಿತರಿಸಲಾಗಿದೆ. ತಂಡಗಳನ್ನು ರಚಿಸಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಕಾಯಿಸಿ ಆರಿಸಿದ ನೀರು ಸೇವಿಸುವಂತೆ ತಿಳಿಸಲಾಗಿದೆ.
ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ತಕ್ಷಣ ಆಸ್ಪತ್ರೆಗೆ ಧಾವಿಸುವಂತೆ ಮಾಹಿತಿ ನೀಡಲಾಗಿದೆ. ಈ ಬಗ್ಗೆ ಡಂಗೂರ ಸಾರಿಸಿದ್ದು, ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಅಗತ್ಯ ಮಾಹಿತಿ ಪಡೆಯುತ್ತಿರುವುದಾಗಿ ಡಿಎಚ್ ಡಾ.ಅಲಕನಂದಾ ಮಳಗಿ ತಿಳಿಸಿದರು.
ಕಲುಷಿತ ನೀರು ಸೇವಿಸಿ ತೊಂದರೆಯಾಗಿರುವ ಕಡೆ ತಕ್ಷಣ ಭೇಟಿ ನೀಡಿ ಪರಿಹಾರ ಕಲ್ಪಿಸಿ. ತಾತ್ಕಾಲಿಕ ಚಿಕಿತ್ಸಾ ಶಿಬಿರ ಆರಂಭಿಸಿ ಚಿಕಿತ್ಸೆ ನೀಡಿ. ತಹಸೀಲ್ದಾರ್‌ಗಳು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ನಿರಂತರ ಸಭೆ ನಡೆಸಿ ಕೈಗೊಂಡ ಪರಿಹಾರ ಕುರಿತು ಮಾಹಿತಿ ಪಡೆಯಿರಿ. | ಎಂ.ಸುಂದರೇಶ ಬಾಬು, ಜಿಲ್ಲಾಧಿಕಾರಿ, ಕೊಪ್ಪಳ ಕಾಯಿಸಿ ಆರಿಸಿದ ನೀರು ಸೇವಿಸುವಂತೆ ಜನರಿಗೆ ತಿಳಿಸಿ. ಚಿಕಿತ್ಸೆಗೆ ದಾಖಲಾದವರಿಗೆ ಅಗತ್ಯ ಸೇವೆ ನೀಡಿ. ಮನೆ-ಮನೆ ಭೇಟಿ ನೀಡಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿ. ತಾಪಂ ಇಒಗಳು ನಿಮ್ಮ ವ್ಯಾಪ್ತಿಯ ಗ್ರಾಮಗಳ ಮೇಲ್ವಿಚರಣೆ ನಡೆಸಿ.| ರಾಹುಲ್ ರತ್ನಂ ಪಾಂಡೆಯ, ಜಿಪಂ ಸಿಇಒ