ಪರಿಸರ ಸಂರಕ್ಷಣೆ ಕುರಿತು ಚಿತ್ರಕಲಾ ಸ್ಪರ್ಧೆ

RBS_9068
Published on


ವಿಜಯವಾಣಿ ಸುದ್ದಿಜಾಲ ಮೈಸೂರು
ನಗರಪಾಲಿಕೆ ವತಿಯಿಂದ ಸ್ವಚ್ಛ ಸರ್ವೇಕ್ಷಣೆಯ ಅಂಗವಾಗಿ ‘ಸ್ವಚ್ಛತಾ ಹೀರೋ/ಪೇಂಟಿಂಗ್ ಹೀರೋ’ ಎಂಬ ಶೀರ್ಷಿಕೆಯಡಿಯಲ್ಲಿ ಗುರುವಾರ ‘ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆ’ ಕುರಿತು ಚಿತ್ರಕಲಾ ಸ್ಪರ್ಧೆ ನಡೆಯಿತು.
ನಮ್ಮ ಮೈಸೂರು ಫೌಂಡೇಷನ್ ಸೇರಿದಂತೆ ನಾನಾ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ 25ಕ್ಕೂ ಹೆಚ್ಚು ಕಲಾವಿದರು ಸ್ಪರ್ಧಿಸಿದ್ದರು. ಮೃಗಾಲಯದ ಗೋಡೆಗಳ ಮೇಲೆ ಕಲಾವಿದರ ಕೈಚಳಕದಿಂದ ಸ್ವಚ್ಛತೆ ಬಗೆಗಿನ ಸುಂದರ ಚಿತ್ರಗಳು ಮೂಡಿದ್ದವು. ಒಂದೊಂದು ಚಿತ್ರಗಳು ಒಂದೊಂದು ಸಂದೇಶ ಸಾರಿದವು.
ಚಿತ್ರಕಲಾ ಸ್ಪರ್ಧೆಗೆ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಚಾಲನೆ ನೀಡಿ ಮಾತನಾಡಿ, ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸುವಾಗ ಇಂತಹ ಜಾಗೃತಿ ಪೇಂಟಿಂಗ್‌ಗಳನ್ನು ನೋಡಿ ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಅರಿಯಲಿ ಎಂಬ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಕಲಾವಿದರಾದ ಚಾಮರಾಜನಗರದ ಎಸ್.ಮಧುಸೂದನ್ ಹಾಗೂ ಮೈಸೂರಿನ ಎಲ್.ಯೋಗಾನಂದ್ ಪ್ರಥಮ ಸ್ಥಾನ ಪಡೆದು 10 ಸಾವಿರ ರೂ. ನಗದು ಬಹುಮಾನ ಗಳಿಸಿದರು. ವೃಂದಾ, ಎಚ್.ಎನ್.ಕಿರಣ್, ಬಿ.ಚಂದ್ರಶೇಖರ್, ಎ.ಎಸ್.ದೀಕ್ಷಿತ್, ಕೆ.ಶರತ್, ದಯಾನಂದ ನಾಗರಾಜು, ಎಸ್.ಮಧು, ಎ.ಅನಿಲ್ ಕುಮಾರ್, ಪಿ.ಮೇಘ, ರಾಣಿ, ಟಿ.ಆರ್.ಬಂಗಾರ ಅವರಿಗೆ ಸಮಾಧಾನಕರ ಪ್ರಶಸ್ತಿ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net