

ತಿ.ನರಸೀಪುರ: ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ವೋಲ್ವೋ ಗ್ರೂಪ್ ಇಂಡಿಯ ಪ್ರೈ. ಲಿಮಿಟೆಡ್‌ನಿಂದ 7 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಲಾಯಿತು.
ಘಟಕ ಉದ್ಘಾಟಿಸಿ ಮಾತನಾಡಿದ ಸಿಎಸ್‌ಆರ್ ವಿಭಾಗದ ನಿರ್ದೇಶಕ ಜಿ.ವಿ.ರಾವ್ ನಾಣ್ಯ, ಗ್ರಾಮೀಣ ಪ್ರದೇಶದಲ್ಲಿ ಅಶುದ್ಧ ನೀರು ಸೇವನೆಯಿಂದ ಮಕ್ಕಳು, ವೃದ್ಧರು ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಇದನ್ನು ತಡೆಗಟ್ಟಲು ಶುದ್ಧ ನೀರು ಘಟಕ ಸ್ಥಾಪಿಸಲಾಗುತ್ತಿದೆ ಎಂದರು.
ವೋಲ್ವೋ ಕಂಪನಿ ಆರು ಜಿಲ್ಲೆಗಳಲ್ಲಿ ಸುಮಾರು 34 ಫ್ಲಾಂಟ್‌ಗಳನ್ನು ತೆರೆದು ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶದವರಿಗೂ ಶುದ್ಧ ನೀರು ಸಿಗಲಿದೆ ಎಂದು ಹೇಳಿದರು.
ರೈತ ಮುಖಂಡ ಬಿ.ಎಂ ಶಿವಮಲ್ಲಪ್ಪ ಮಾತನಾಡಿ, ಹಿಂದೆ ನಾಲೆ, ಬೋರ್‌ವೆಲ್, ನದಿಯಲ್ಲಿ ಹರಿಯುವ ನೀರನ್ನು ಸೇವನೆ ಮಾಡಲಾಗುತ್ತಿತ್ತು. ಆದರೆ ಇಂದು ನದಿ, ಬೋರ್‌ವೇಲ್ ಬತ್ತಿ ಹೋಗಿರುವುದರಿಂದ ನೀರು ಕಲುಷಿತಗೊಂಡಿದೆ. ಪರಿಣಾಮ ಕುಡಿಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮನುಷ್ಯನಿಗೆ ನೂರಾರು ಕಾಯಿಲೆಗಳು ಸಂಭವಿಸಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾನೆ. ಇದನ್ನು ಅರಿತ ವೋಲ್ವೋ ಕಂಪನಿಯವರು ಉಚಿತವಾಗಿ ಶುದ್ಧ ಕುಡಿಯುವ ನೀರಿನ ಘಟಕ ತೆರೆದಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.
ದಾಸೋಹ ಮಠದ ಮಹದೇವ ಸ್ವಾಮೀಜಿ, ಬೆನಕನಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಎಂ.ಬಿ ಬಸವಣ್ಣ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಗೌರಮ್ಮ ರಾಜಶೇಖರಮೂರ್ತಿ, ಮುಖಂಡರಾದ ಪ್ರಭುಸ್ವಾಮಿ, ಉಮೇಶ್, ರಘು, ಆಕಾಶ್, ನಾಗೇಂದ್ರ ಸ್ವಾಮಿ, ಮಾದಪ್ಪ, ಪರಶಿವಮೂರ್ತಿ ಇತರರಿದ್ದರು.