

ಕೆ.ಎಂ.ದೊಡ್ಡಿ: ಸಮೀಪದ ಅಂಬರಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಶಾಸಕ ಕದಲೂರು ಉದಯ್ ಅವರು ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ನಿರ್ಮಾಣ ಮಾಡಿರುವ ಶುದ್ಧ ಕುಡಿಯುವ ನೀರು ಘಟಕಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿ, ಶುದ್ಧ ಕುಡಿಯುವ ನೀರು ನಮ್ಮೆಲ್ಲರ ಹಕ್ಕು. ಹಾಗೆಂದು ಕುಡಿಯುವ ನೀರನ್ನು ಪೋಲು ಮಾಡುವುದು ಅಕ್ಷಮ್ಯ ಅಪರಾಧ. ನೀರು ಅತ್ಯಾಮೂಲ್ಯ, ಹೀಗಾಗಿ ಮಿತವಾಗಿ ಬಳಸಬೇಕು. ಮುಂದಿನ ಪೀಳಿಗೆಗೂ ನೈಸರ್ಗಿಕ ಸಂಪತ್ತನ್ನು ಉಳಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.
ಈ ಹಿಂದೆ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ 25ಕ್ಕೂ ಹೆಚ್ಚು ದರ ರಹಿತ ನೀರಿನ ಘಟಕಗಳನ್ನು ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಸ್ಥಾಪಿಸಿದ್ದು ಟ್ರಸ್ಟ್ ಸಮಾಜಮುಖಿಯಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಸರ್ಕಾರದಿಂದ ಬರುವ ಅನೇಕ ಯೋಜನೆಗಳನ್ನು ಪಡೆದುಕೊಂಡು ಯುವಕರು ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಂಡರೆ ನಿರುದ್ಯೋಗ ಸಮಸ್ಯೆ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ಯುವಜನರು ಸ್ವಯಂ ಉದ್ಯೋಗದ ಕಡೆ ಹೆಚ್ಚು ಒತ್ತು ನೀಡಿ ಎಂದು ಹೇಳಿದರು.
ಗ್ರಾಮಸ್ಥರು ಮಾತನಾಡಿ, ಗ್ರಾಮದಲ್ಲಿ ಕೃಷಿ ಚಟುವಟಿಕೆಗಳಿಗೆ ವಿದ್ಯುತ್ ತೊಂದರೆ ಆಗುತ್ತಿದೆ. ಇದನ್ನು ಸರಿಪಡಿಸಿಕೊಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು. ಶಾಸಕರು ಸೆಸ್ಕ್ ಇಇಗೆ ಕರೆ ಮಾಡಿ ವಿದ್ಯುತ್ ಸಮಸ್ಯೆ ಸರಿಪಡಿಸಲು ಸೂಚಿಸಿದರು.
ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಬಿ. ಬಸವರಾಜು, ಜಿ.ಪಂ.ಮಾಜಿ ಸದಸ್ಯ ಎ.ಎಸ್. ರಾಜೀವ, ಗ್ರಾಪಂ ಸದಸ್ಯರಾದ ಮಹೇಶ, ಗೀತಾ ಸತೀಶ, ಲಕ್ಷ್ಮೀ ರಾಮಚಂದ್ರ, ಮುಖಂಡ ಅಂಬರಹಳ್ಳಿ ಕೃಷ್ಣ ಇತರರು ಇದ್ದರು.