ಶುದ್ಧ ಕುಡಿಯುವ ನೀರಿನ ಘಟಕ ಬಂದ್

WATER UNIT
Published on

ಗಜೇಂದ್ರಗಡ: ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿಷ್ಕಾಳಜಿಯಿಂದ ಪುರಸಭೆಯ ಶುದ್ಧ ಕುಡಿಯುವ ನೀರಿನ ಘಟಕಗಳು ಬಂದ್ ಆಗಿವೆ. ಪರಿಣಾಮ ಅನಧಿಕೃತ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳ ನೀರಿನ ವ್ಯಾಪಾರ ಬಲು ಜೋರಾಗಿದೆ.

ಪಟ್ಟಣದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ನಿರ್ಮಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಉದ್ಘಾಟನೆಗಾಗಿ ಮಾತ್ರ ಬಾಗಿಲು ತೆಗೆದಿದ್ದು ಬಿಟ್ಟರೆ ಈವರೆಗೂ ತೆರದೇ ಇಲ್ಲ.

ಪಟ್ಟಣದ 23 ವಾರ್ಡ್‌ಗಳ ಜನರಿಗೆ ಅನುಕೂಲ ಕಲ್ಪಿಸಲು 2-3 ವಾರ್ಡ್‌ಗಳಿಗೆ ಸಮೀಪದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ. ಈ ಘಟಕಗಳು ಸಿಬ್ಬಂದಿ ಕೊರತೆಯಿಂದ ನಿರ್ವಹಣೆ ಇಲ್ಲದೆ ಹಾಳಾಗುತ್ತಿವೆ.

ಪಟ್ಟಣದ 1ನೇ ವಾರ್ಡ್‌ನ ಸೊನ್ನದವರ ಮಿಲ್ ಹತ್ತಿರ, 3 ನೇ ವಾರ್ಡ್‌ನ ರಂಗಮಂದಿರ ಹತ್ತಿರ, 15 ನೇ ವಾರ್ಡ್‌ನ ನೇಕಾರ ಕಾಲನಿ ಹತ್ತಿರ, 17ನೇ ವಾರ್ಡ್‌ನ ಪುರಸಭೆಯಲ್ಲಿ, 23ನೇ ವಾರ್ಡ್‌ನ ಉಣಚಗೇರಿಯಲ್ಲಿ, 21 ವಾರ್ಡ್‌ನ ಹರಿಜನ ಕೇರಿಯಲ್ಲಿ ಜನರಿಗೆ ಶುದ್ಧ ಕುಡಿಯುವ ನೀರೊದಗಿಸಲು ಘಟಕಗಳನ್ನು ಸ್ಥಾಪಿಸಲಾಗಿದೆ. 1ನೇ ವಾರ್ಡ್‌ನಲ್ಲಿರುವ ಘಟಕ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಹೊಸದಾಗಿ ನಿರ್ಮಿಸಿದ 3,15,21,23 ವಾರ್ಡ್‌ಗಳಲ್ಲಿ ಒಟ್ಟು ನಾಲ್ಕು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪುರಸಭೆಯ 2016-17 ನೇ ಸಾಲಿನ 14 ನೇ ಹಣಕಾಸು ಯೋಜನೆಯಲ್ಲಿ ಒಟ್ಟು 26.70 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾಗಿತ್ತು.

ಎಲ್ಲ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿಯೂ ನೀರಿನ ವ್ಯವಸ್ಥೆ ಮಾಡಲಾಗಿದೆ. ಪುರಸಭೆಯವರು ಇದರ ನಿರ್ವಹಣೆ ಮಾಡಬೇಕು. ಆದರೆ, ಸಿಬ್ಬಂದಿ ಕೊರತೆಯಿಂದ 5 ವರ್ಷದ ಹಿಂದೆ ಸ್ಥಾಪಿಸಲಾದ ಘಟಕಗಳ ಯಂತ್ರಗಳು ತುಕ್ಕು ಹಿಡಿಯುತ್ತಿವೆ.

ಖಾಸಗಿಯವರ ಒತ್ತಡ?:

ಸರ್ಕಾರಿ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸದೇ ಇರುವುದರಿಂದ ತಾತ್ಕಾಲಿಕವಾಗಿ ಪುರಸಭೆ ವತಿಯಿಂದ ಅನುಮತಿ ಪಡೆದು ಟಂಟಂ, ಟಾಟಾ ಏಸ್ ವಾಹನಗಳ ಮೂಲಕ 7 ಶುದ್ಧ ಕುಡಿಯುವ ನೀರಿನ ಘಟಕಗಳು ನೀರು ಸರಬರಾಜ ಮಾಡುತ್ತಿವೆ. ಈ ಖಾಸಗಿ ಘಟಕಗಳ ಮಾಲೀಕರ ನಿರ್ದೇಶನದಂತೆ ಸರ್ಕಾರಿ ಘಟಕಗಳನ್ನು ಪ್ರಾರಂಭ ಮಾಡುತ್ತಿಲ್ಲವೇ ಎನ್ನುವುದು ಸ್ಥಳೀಯರ ಅನುಮಾನ.
ಖಾಸಗಿ ಘಟಕಗಳು ಸರ್ಕಾರ ವಿಧಿಸಿರುವ ನಿಯಮಗಳನ್ನು ಗಾಳಿಗೆ ತೂರಿ ಪ್ಲಾಸ್ಟಿಕ್ ಸಿಂಟೆಕ್ಸ್‌ಗಳನ್ನು ಗಾಡಿಯಲ್ಲಿ ಇಟ್ಟುಕೊಂಡು ಮನೆ ಮನೆಗೆ ನೀರು ಸರಬರಾಜು ಮಾಡುತ್ತಿವೆ. ಖಾಸಗಿಯವರು ಒಂದು ಕೊಡಕ್ಕೆ 10 ರೂ.ನಂತೆ ಪಡೆಯುತ್ತಿದ್ದಾರೆ. ಹಣವಿದ್ದವರು 10 ರೂ. ಕೊಟ್ಟು ನೀರು ತುಂಬಿಕೊಳ್ಳುತ್ತಾರೆ. ಆದರೆ, ಹಣ ಇಲ್ಲದವರು ಸಮೀಪದ ತೋಟಗಳಲ್ಲಿ ಅಲೆದಾಡಿ ಕುಡಿಯುವ ನೀರು ತರುತ್ತಿದ್ದಾರೆ. ಖಾಸಗಿ ನೀರಿನ ಘಟಕಗಳು ಮನೆ ಮನೆಗೆ ಹೋಗಿ ನೀರು ಮಾರಾಟ ಮಾಡಬಾರದು ಎಂಬ ನಿಯಮವಿದ್ದರೂ ಖಾಸಗಿ ಘಟಕದವರು ಅದನ್ನು ಪಾಲಿಸುತ್ತಿಲ್ಲ. ಬೆಳಗಾದರೆ ಸಾಕು ಮನೆ ಮನೆಗೆ ಹೋಗಿ ಮಾರಾಟ ಮಾಡುತ್ತಿದ್ದಾರೆ.

ನಮ್ಮ ವಾರ್ಡ್‌ನಲ್ಲಿ ಪುರಸಭೆಯ ಶುದ್ಧ ಕುಡಿಯುವ ನೀರಿನ ಘಟಕ ನಿರುಪಯುಕ್ತವಾಗಿದೆ. ಒಂದೇ ಘಟಕದ ನೀರು ಕುಡಿದರೆ ಯಾವ ತೊಂದರೆಯಾಗುವುದಿಲ್ಲ. ಬೇರೆ ಬೇರೆ ಮಾಲೀಕತ್ವದ ನೀರು ಕುಡಿದರೆ ಅದರಲ್ಲಿರುವ ರಾಸಾಯನಿಕದಿಂದ ಬಾಯಲ್ಲಿ ಗುಳ್ಳಿ ಏಳುವುದು, ಎದೆ ಉರಿಯುವುದು ತರೆ ಸಮಸ್ಯೆಗಳು ಕಂಡುಬರುತ್ತಿವೆ. ಪುರಸಭೆಯ ಘಟಕಗಳು ಕಾರ್ಯನಿರ್ವಹಿಸಿದರೆ ನಮಗೆ ಆರ್ಥಿಕ ಹೊರೆಯೂ ತಗ್ಗುತ್ತದೆ.ಪ್ರವೀಣ ಹಿರೇಮಠ, ಸ್ಥಳೀಯ ನಿವಾಸಿ 4 ವರ್ಷಗಳಿಂದ ನಿರ್ವಹಣೆ ಸೇರಿದಂತೆ ವಿವಿಧ ಕಾರಣಗಳಿಂದ ನೀರಿನ ಘಟಕಗಳು ಬಂದ್ ಆಗಿವೆ. ಯಂತ್ರಗಳು ಬಹು ದಿನಗಳಿಂದ ಬಳಸದೇ ಇರುವುದುರಿಂದ ಜಾಮ್ ಆಗಿವೆ. 10 ದಿನದಲ್ಲಿ ದುರಸ್ತಿ ಮಾಡಿಸಿ ಎಲ್ಲ ಘಟಕಗಳನ್ನು ಪ್ರಾರಂಭಿಸಲಾಗುತ್ತದೆ.ರೇಣುಕಾ ದೇಸಾಯಿ, ಪುರಸಭೆ ಮುಖ್ಯಾಧಿಕಾರಿ ಗಜೇಂದ್ರಗಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net