ಈ ನಾಲ್ಕು ರಸ್ತೆಗಳಲ್ಲಿ ಇನ್ಮುಂದೆ ಸಾರ್ವಜನಿಕರು ನಡೆದೇ ಸಂಚರಿಸಬೇಕಾದೀತು!

Church Street
ಕ್ಲೀನ್ ಏರ್ ಸ್ಟ್ರೀಟ್​ ಅನುಷ್ಠಾನದ ಬಳಿ ಚರ್ಚ್​ ಸ್ಟ್ರೀಟ್ ದೃಶ್ಯ
Published on

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಂಚರಿಸುವವರು ಇನ್ಮುಂದೆ ಈ ನಾಲ್ಕು ರಸ್ತೆಗಳಲ್ಲಿ ನಡೆದುಕೊಂಡೇ ಬರಬೇಕಾದೀತು. ವಾರಾಂತ್ಯ ಹಾಗೂ ಸರ್ಕಾರಿ ರಜಾ ದಿನಗಳಲ್ಲಿ ಈ ರಸ್ತೆಗಳಿಗೆ ಹೋದರೆ ವಾಹನಗಳನ್ನು ದೂರದಲ್ಲಿ ನಿಲ್ಲಿಸಿ ನಟರಾಜ ಸರ್ವೀಸ್​ಗೆ ಶರಣಾಗಬೇಕಾಗಬಹುದು. ಏಕೆಂದರೆ ಅಂಥದ್ದೊಂದು ಯೋಜನೆಯನ್ನು ಜಾರಿಗೊಳಿಸಲು ನಗರ ಭೂಸಾರಿಗೆ ನಿರ್ದೇಶನಾಲಯ ಚಿಂತನೆ ನಡೆಸಿದೆ.

ಅಂದರೆ ವಾಯುಮಾಲಿನ್ಯ ಕಡಿಮೆ ಮಾಡುವ ಸಲುವಾಗಿ ಚರ್ಚ್​ಸ್ಟ್ರೀಟ್​ನಲ್ಲಿ ಜಾರಿಗೆ ತರಲಾಗಿರುವ ಕ್ಲೀನ್​ ಏರ್​ ಸ್ಟ್ರೀಟ್​ ಪರಿಕಲ್ಪನೆ ಹೊಸದಾಗಿ ನಾಲ್ಕು ರಸ್ತೆಗಳಲ್ಲಿ ಅನುಷ್ಠಾನಗೊಳಿಸಲು ನಗರ ಭೂಸಾರಿಗೆ ನಿರ್ದೇಶನಾಲಯ ಚಿಂತನೆ ನಡೆಸಿದೆ. ವಾಹನಗಳಿಂದ ಗಿಜಿಗುಡುವ ರಸ್ತೆಗಳಲ್ಲಿ ವಾರಾಂತ್ಯದ ದಿನಗಳಂದು ವಾಹನ ಸಂಚಾರಕ್ಕೆ ನಿಷೇಧ ಹೇರಿ ಕ್ಲೀನ್​ ಏರ್​ ಸ್ಟ್ರೀಟ್​ ಪರಿಕಲ್ಪನೆ ಜಾರಿ ಮಾಡಲಾಗುತ್ತಿದೆ. ಇದು ಚರ್ಚ್​ಸ್ಟ್ರೀಟ್​ನಲ್ಲಿ ಈಗಾಗಲೆ ಜಾರಿಯಾಗಿದ್ದು, 2021ರ ಫೆಬ್ರವರಿ ಅಂತ್ಯದವರೆಗೆ ವಾರಾಂತ್ಯ ಹಾಗೂ ಸರ್ಕಾರಿ ರಜಾ ದಿನಗಳಂದು ವಾಹನ ಸಂಚಾರ ನಿಷೇಧಿಸಲಾಗಿದೆ.

ಕ್ಲೀನ್ ಏರ್​ ಸ್ಟ್ರೀಟ್ ಜಾರಿ​ ಪರಿಣಾಮ ಸಾರ್ವಜನಿಕರು ಚರ್ಚ್​ಸ್ಟ್ರೀಟ್​ಅನ್ನು ಪಿಕ್​ನಿಕ್​ ಸ್ಪಾಟ್​ ಆಗಿ ನೋಡುತ್ತಿದ್ದು, ಶನಿವಾರ, ಭಾನುವಾರ ಬಂತೆಂದರೆ ಜನರಿಂದ ಗಿಜಿಗುಡಲು ಆರಂಭವಾಗಿದೆ. ಹೀಗಾಗಿ ಈ ರಸ್ತೆಯಲ್ಲಿ ಗಾಳಿಯ ಗುಣಮಟ್ಟ ಹೆಚ್ಚಿರುವುದಲ್ಲದೆ, ಜನರಿಗೆ ಸಮಯ ಕಳೆಯಲು ಉತ್ತಮ ಸ್ಥಳವಾಗಿ ಮಾರ್ಪಟ್ಟಿದೆ. ಇನ್ನೂ ನಾಲ್ಕು ರಸ್ತೆಗಳಲ್ಲಿ ಅದೇ ಮಾದರಿಯನ್ನು ಜಾರಿಗೊಳಿಸಲು ಡಲ್ಟ್​ ಚಿಂತನೆ ನಡೆಸಿದ್ದು, ಆ ಕುರಿತು ಶೀಘ್ರದಲ್ಲಿ ಸ್ಥಳಿಯರು, ಬಿಬಿಎಂಪಿ, ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸಲಿದೆ.

ಇವೇ ಆ ನಾಲ್ಕು ರಸ್ತೆಗಳು

ಬೆಂಗಳೂರಿನ ಪ್ರಮುಖ ವ್ಯಾಪಾರಿ ಬೀದಿಗಳಾದ ಗಾಂಧಿ ಬಜಾರ್​, ಅವೆನ್ಯೂ ರಸ್ತೆ, ಮಲ್ಲೇಶ್ವರ 8ನೇ ಅಡ್ಡರಸ್ತೆ ಹಾಗೂ ಜಯನಗರದ ಯಾವುದಾದರೊಂದು ರಸ್ತೆಯಲ್ಲಿ ಕ್ಲೀನ್​ ಏರ್​ ಸ್ಟ್ರೀಟ್​ ಅನುಷ್ಠಾನಕ್ಕೆ ಚಿಂತನೆ ನಡೆಸಲಾಗಿದೆ. ಅದರಲ್ಲಿ ಗಾಂಧಿ ಬಜಾರ್​ ಮತ್ತು ಮಲ್ಲೇಶ್ವರ 8ನೇ ಅಡ್ಡರಸ್ತೆಯಲ್ಲಿ ಈ ಪರಿಕಲ್ಪನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿ ಚರ್ಚೆಗಳನ್ನು ಆರಂಭಿಸಲಾಗುತ್ತದೆ. ಉಳಿದೆರಡು ರಸ್ತೆಗಳಲ್ಲಿ ಸಾಧಕ-ಬಾಧಕಗಳ ಅಧ್ಯಯನ ಮಾಡಿ ನಂತರ ಸಭೆ ನಡೆಸಲಾಗುತ್ತದೆ. ಈ ಪರಿಕಲ್ಪನೆ ಜಾರಿಯಾದರೆ ಶನಿವಾರ ಮತ್ತು ಭಾನುವಾರ ಹಾಗೂ ಸರ್ಕಾರಿ ರಜಾದಿನಗಳಂದು ಜನರು ಆ ರಸ್ತೆಗಳಿಗೆ ನಡೆದುಕೊಂಡೇ ಬರಬೇಕಿದೆ.

ಜಾತ್ರೆ ಬೀದಿಯಾಗಿರುವ ಚರ್ಚ್​ಸ್ಟ್ರೀಟ್​

ಚರ್ಚ್​ಸ್ಟ್ರೀಟ್​ನಲ್ಲಿ ಅನುಷ್ಠಾನಗೊಂಡಿರುವ ಕ್ಲೀನ್​ ಏರ್​ ಸ್ಟ್ರೀಟ್​ ಉಪಕ್ರಮ ಯಶಸ್ವಿಯಾಗಿದೆ. ವಾರಾಂತ್ಯದ ದಿನಗಳಂದು ವಾಯು, ಶಬ್ದ ಮಾಲಿನ್ಯಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ವಾಹನ ಸವಾರರಷ್ಟೇ ಅಲ್ಲದೆ, ಚರ್ಚ್​ಸ್ಟ್ರೀಟ್​ನಲ್ಲಿನ ವ್ಯಾಪಾರಿಗಳು ಈ ಉಪಕ್ರಮಕ್ಕೆ ಬೆಂಬಲ ಸೂಚಿಸಿದ್ದಾರೆ. ವಾರಾಂತ್ಯದ ದಿನಗಳಂದು ಸ್ಥಳಿಯ ನಿವಾಸಿಗಳು ಸೇರಿ ಇನ್ನಿತರರು ಜಾತ್ರೆ ರೀತಿಯಲ್ಲಿ ಕ್ಲೀನ್​ ಏರ್​ ಸ್ಟ್ರೀಟ್​ ಆಚರಿಸುತ್ತಿದ್ದಾರೆ. ಅದರ ಜತೆಗೆ ಸ್ಥಳದಲ್ಲೇ ಸಂಗೀತ ಕಾರ್ಯಕ್ರಮ, ಪಾದಚಾರಿ ಮಾರ್ಗದಲ್ಲಿ ಪುಸ್ತಕ ಸೇರಿ ಇನ್ನಿತರ ವ್ಯಾಪಾರಗಳು ನಡೆಯುತ್ತಿವೆ. ಹಾಗೆಯೇ, ಪೂಜಾ ಕುಣಿತ, ಕಂಸಾಳೆಯಂಥ ಜನಪದ ಕಲೆಗಳ ಪ್ರದರ್ಶನವೂ ನಡೆಯುತ್ತಿದೆ.

ಇಡೀ ವರ್ಷಕ್ಕೆ ವಿಸ್ತರಣೆ

ಚರ್ಚ್​ಸ್ಟೀಟ್​ನಲ್ಲಿನ ಯಶಸ್ಸಿನಿಂದಾಗಿ ಕ್ಲೀನ್​ ಏರ್​ ಸ್ಟ್ರೀಟ್​ ಉಪಕ್ರಮವನ್ನು ಫೆಬ್ರವರಿಗೆ ಅಂತ್ಯವಾಗಿಸದೇ, ಅದನ್ನು ಹಾಗೆಯೇ ಮುಂದುವರಿಸಲು ಡಲ್ಟ್​ ಚಿಂತಿಸಿದೆ. ಅದಕ್ಕಾಗಿ ಸ್ಥಳಿಯ ವ್ಯಾಪಾರಿಗಳೊಂದಿಗೆ ಚಚಿರ್ಸಲಿದೆ. ಅವರಿಂದ ಒಪ್ಪಿಗೆ ದೊರೆತರೆ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ವಾರಾಂತ್ಯದಂದು ವಾಹನ ಸಂಚಾರ ನಿಷೇಧವನ್ನು ಹಾಗೆಯೇ ಮುಂದುರಿಸಲಾಗುತ್ತದೆ.

ಚರ್ಚ್​ಸ್ಟ್ರೀಟ್​ನಲ್ಲಿ ಅನುಷ್ಠಾನಗೊಳಿಸಿರುವ ಕ್ಲೀನ್​ ಏರ್​ ಸ್ಟ್ರೀಟ್​ ಉಪಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಾಯು, ಶಬ್ದ ಮಾಲಿನ್ಯಗಳು ಕಡಿಮೆಯಾಗಿವೆ. ಇನ್ನೂ ನಾಲ್ಕು ರಸ್ತೆಗಳಲ್ಲಿ ಕ್ಲೀನ್​ಏರ್​ ಸ್ಟ್ರೀಟ್​ ಅನುಷ್ಠಾನಕ್ಕೆ ಪ್ರಸ್ತಾವನೆಯಿದ್ದು, ಆ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು.| ವಿ. ಮಂಜುಳಾ ಡಲ್ಟ್​ ಆಯುಕ್ತೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net