

ಮಡಿಕೇರಿ:
ದೇಶದಲ್ಲೇ ಅತ್ಯಂತ ಶುದ್ಧ ಗಾಳಿ ಹೊಂದಿರುವ ಟಾಪ್ ೧೦ ಸ್ಥಳಗಳಲ್ಲಿ ಮಡಿಕೇರಿಯೂ ಸ್ಥಾನ ಪಡೆದುಕೊಂಡಿದೆ. ಕ್ಲೈಮೆಟ್ ಟ್ರೆಂಡ್ಸ್, ರೆಸ್ಪೈರರ್ ಲಿವಿಂಗ್ ಸೈನ್ಸ್ ಹಾಗೂ ರೆಸ್ಪೈರರ್ ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಕರ್ನಾಟಕದ ೮ ಸ್ಥಳಗಳು ಈ ಪಟ್ಟಿಯಲ್ಲಿ ಪಾರಮ್ಯ ಮೆರೆದಿದ್ದು, ಮಡಿಕೇರಿ ೫ನೇ ಸ್ಥಾನದಲ್ಲಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಗಾಳಿಯ ಗುಣಮಟ್ಟದಲ್ಲಿ ಏರಿಕೆ ಕಂಡು ಬಂದಿದೆ.
ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರತಿನಿತ್ಯ ಕಲೆ ಹಾಕುವ ಮಾಹಿತಿಗಳನ್ನು ವಿಶ್ಲೇಷಿಸಿ ಮಹಾರಾಷ್ಟ್ರದ ಪುಣೆ ಮೂಲದ ರೆಸ್ಪೈರರ್ ಲಿವಿಂಗ್ ಸೈನ್ಸಸ್ ಸಂಸ್ಥೆ ದೇಶದ ಅತ್ಯಂತ ಪರಿಶುದ್ಧ ಗಾಳಿ ಹೊಂದಿರುವ ಪಟ್ಟಿ ತಯಾರಿಸಿದೆ. ರೆಸ್ಪೈರರ್ ವರದಿ ಮತ್ತು ಕ್ಲೈಮೆಟ್ ಟ್ರೆಂಡ್ಸ್ ಜತೆಗೂಡಿ ಈ ವರದಿ ತಯಾರಿಸಲಾಗಿದೆ. ರೆಸ್ಪೈರರ್ ಲಿವಿಂಗ್ ಸೈನ್ಸಸ್ ಸಂಸ್ಥೆ ಭಾರತದ ಪ್ರಮುಖ ಮಾಲಿನ್ಯ ಮಾಪಕ ಮತ್ತು ವರದಿ ನೀಡುವ ಸಂಸ್ಥೆಯಾಗಿದ್ದು, ಮೇಕ್‌ನ ಇನ್ ಇಂಡಿಯಾ ಘೋಷಣೆಗೆ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತಿದೆ. ಇದರ ಒಂದು ಭಾಗವಾಗಿರುವ ರೆಸ್ಪೈರರ್ ವರದಿ ಡೇಟಾ ಆಧಾರಿತ ವರದಿಗಳು ಮತ್ತು ವಿಶ್ಲೇಷಣೆಯನ್ನು ನೀಡುವ ಕೆಲಸ ಮಾಡಿದರೆ, ಹವಾಮಾನ ಚಟುವಟಿಕೆ, ಪರಿಸರ, ಹವಾಮಾನ ಬದಲಾವಣೆ ಹಾಗೂ ಸುಸ್ಥಿರ ಅಭಿವೃದ್ಧಿಯ ಸಮಸ್ಯೆಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುವ ಕೆಲಸವನ್ನು ಕ್ಲೈಮೆಟ್ ಟ್ರೆಂಡ್ಸ್ ಮಾಡುತ್ತದೆ. ಹಾಗಾಗಿ ಈ ವರದಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ.
ಶುದ್ಧಗಾಳಿ ಹೊಂದಿರುವ ದೇಶದ ಪ್ರಥಮ ಹತ್ತು ಸ್ಥಳಗಳಲ್ಲಿ ಮಿಜೋರಾಂನ ಐಜ್ವಾಲ್ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನವನ್ನು ಚಿಕ್ಕಮಗಳೂರು ಪಡೆದುಕೊಂಡಿದ್ದು, ಮೂರನೇ ಸ್ಥಾನದಲ್ಲಿ ಹರಿಯಾಣದ ಮಂಡಿಕೇರ ಇದೆ. ನಾಲ್ಕನೇ ಸ್ಥಾನವನ್ನು ಚಾಮರಾಜನಗರ ಪಡೆದುಕೊಂಡಿದ್ದು, ಮಡಿಕೇರಿ ೫ ನೇ ಸ್ಥಾನದಲ್ಲಿದೆ. ನಂತರದ ಸ್ಥಾನಗಳನ್ನು ಕ್ರಮವಾಗಿ ವಿಜಯಪುರ, ರಾಯಚೂರು, ಶಿವಮೊಗ್ಗ, ಗದಗ ಹಾಗೂ ೧೦ನೇ ಸ್ಥಾನದಲ್ಲಿ ಮೈಸೂರು ಇದೆ. ೨೦೨೧ರ ಅಕ್ಟೋಬರ್‌ನಿಂದ ೨೦೨೨ರ ಸೆಪ್ಟೆಂಬರ್ ಮತ್ತು ೨೦೨೨ರ ಅಕ್ಟೋಬರ್‌ನಿಂದ ೨೦೨೩ರ ಸೆಪ್ಟೆಂಬರ್ ನಡುವಿನ ಡೇಟಾ ಕಲೆ ಹಾಕಿ ವಿಶ್ಲೇಷಣೆ ನಡೆಸಿದ ನಂತರ ಈ ವರದಿ ತಯಾರಿಸಲಾಗಿದೆ.
ಮಡಿಕೇರಿಯಲ್ಲಿ ಗಾಳಿಯಲ್ಲಿರುವ ಮಾಲಿನ್ಯ ಪ್ರಮಾಣ ಆಕ್ಟೋಬರ್ ೨೦೨೧ರಿಂದ ಸೆಪ್ಟೆಂಬರ್ ೨೦೨೨ರ ತನಕ ೨೦.೭ ರಷ್ಟಿತ್ತು. ೨೦೨೨ ಅಕ್ಟೋಬರ್‌ನಿಂದ ೨೦೨೩ರ ಸೆಪ್ಟೆಂಬರ್ ಅವಧಿಯಲ್ಲಿ ಇದು ೧೮.೧ಕ್ಕೆ ಇಳಿಕೆ ಆಗುವ ಮೂಲಕ ಶೇ. ೧೨.೪ರಷ್ಟು ಪ್ರಮಾಣದಲ್ಲಿ ಗಾಳಿಯ ಗುಣಮಟ್ಟದಲ್ಲಿ ಹೆಚ್ಚಳ ಕಂಡು ಬಂದಿದೆ. ಆದರೆ ದೇಶದಲ್ಲೇ ಗಾಳಿಯ ಗುಣಮಟ್ಟದಲ್ಲಿ ಮೊದಲ ಸ್ಥಾನದಲ್ಲಿ ಇರುವ ಮಿಜೋರಾಂನ ಐಜ್ವಾಲ್‌ನಲ್ಲಿ ಆಕ್ಟೋಬರ್ ೨೦೨೧ರಿಂದ ಸೆಪ್ಟೆಂಬರ್ ೨೦೨೨ರ ತನಕ ಮಾಲಿನ್ಯ ಪ್ರಮಾಣ ೮ರಷ್ಟು ಇದ್ದಿದ್ದು, ೨೦೨೨ ಅಕ್ಟೋಬರ್‌ನಿಂದ ೨೦೨೩ರ ಸೆಪ್ಟೆಂಬರ್ ಅವಧಿಯಲ್ಲಿ ೧೧.೧ ಆಗಿದೆ. ಈ ಮೂಲಕ ಗಾಳಿಯ ಗುಣಮಟ್ಟದಲ್ಲಿ ಶೇ. ೩೮.೫ರಷ್ಟು ಇಳಿಕೆ ಆಗಿದೆ. ಇದು ಈಗ ಗಾಳಿಯ ಗುಣಮಟ್ಟದ ರ‌್ಯಾಂಕಿಂಗ್ ಪಟ್ಟಿಯಲ್ಲಿ ಇರುವ ಸ್ಥಳಗಳಿಗೆ ಎಚ್ಚರಿಕೆಯ ಗಂಟೆಯೂ ಆಗಿದೆ.
ಕೊಡಗಿನ ಹಸಿರು ಪರಿಸರ, ಪರಿಶುದ್ಧ ಗಾಳಿ, ಝುಳು ಝುಳು ನೀರು ಪ್ರವಾಸಿಗರಿಗೆ ಅಚ್ಚುಮೆಚ್ಚು. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಇಂತಹ ವಾತಾವರಣ ಕಂಡು ಬರುತ್ತದೆ. ಆದರೆ ನಗರ ಪ್ರದೇಶ, ಪ್ರವಾಸಿತಾಣಗಳಲ್ಲಿ ದಿನಕಳೆದಂತೆ ಪರಿಸ್ಥಿತಿ ಬದಲಾಗುತ್ತಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವಾಯು ಗುಣಮಟ್ಟ (ಎಕ್ಯೂಐ) ಸೂಚ್ಯಂಕ ಪ್ರಮಾಣ ಪ್ರಕಾರ ಕೊಡಗಿನಲ್ಲಿ ಗಾಳಿಯ ಗುಣಮಟ್ಟ ವರ್ಷದ ಬಹುತೇಕ ದಿನಗಳಲ್ಲಿ ಉತ್ತಮ ಎಂದೇ ದಾಖಲಾಗುತ್ತಿದೆ. ಇದೀಗ ಕ್ಲೈಮೆಟ್ ಟ್ರೆಂಡ್ಸ್, ರೆಸ್ಪೈರರ್ ಲಿವಿಂಗ್ ಸೈನ್ಸ್ ಹಾಗೂ ರೆಸ್ಪೈರರ್ ವರದಿಯ ಪ್ರಕಾರ ದೇಶದ ೧೦ ಪರಿಶುದ್ಧ ಗಾಳಿ ಇರುವ ಪ್ರದೇಶದಲ್ಲಿ ಮಡಿಕೇರಿ ಸ್ಥಾನ ಪಡೆದಿರುವುದು ಸ್ಥಳೀಯರಿಗೆ ಖುಷಿ ಕೊಟ್ಟಿದೆ.
ವಾಯು ಗುಣಮಟ್ಟ ಅಳೆಯಲು ಎಕ್ಯೂಐ ಸೂಚಕ ಬಳಸಲಾಗುತ್ತದೆ. ಮನುಷ್ಯರ ಆರೋಗ್ಯ ಮತ್ತು ವಾತಾವರಣದ ಮೇಲೆ ಉಂಟಾಗುವ ವಾಯುಮಾಲಿನ್ಯದ ಪರಿಣಾಮಗಳ ಬಗ್ಗೆ ಈ ಸೂಚಕದಿಂದ ತಿಳಿಯಬಹುದು. ಗಾಳಿಯಲ್ಲಿರುವ ಓಝೋನ್, ಸಣ್ಣ ಕಣಗಳಿಂದಾದ ವಸ್ತುಗಳು, ಸಾರಜನಕ ಡೈ ಆಕ್ಸೈಡ್ ಕಾರ್ಬನ್ ಮಾನಾಕ್ಸೈಡ್ ಸಲರ್ ಡೈ ಆಕ್ಸೈಡ್ ಹಾಗೂ ಸಲರ್ ಸಂಯುಕ್ತಗಳಂತಹ ಮಾಲಿನ್ಯಗಳ ಬಗ್ಗೆ ಎಕ್ಯೂಐ ಸೂಚಕದಿಂದ ಮಾಹಿತಿ ಪಡೆಯಬಹದು. ಮಡಿಕೇರಿಯ ಸ್ಟೋನ್ ಹಿಲ್‌ನಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವಾಯುಮಾಲಿನ್ಯ ಮಾಪನಾ ಕೇಂದ್ರ ಇದೆ. ಗಾಳಿಯಲ್ಲಿನ ಪ್ರತಿಕ್ಷಣದ ಬದಲಾವಣೆಗಳು ಇಲ್ಲಿ ದಾಖಲಾಗುತ್ತದೆ. ಇಲ್ಲಿಯ ವಿವರಗಳು ಮಂಡಳಿಯ ವೆಬ್‌ಸೈಟ್‌ನಲ್ಲಿ ಕ್ಷಣ ಕ್ಷಣಕ್ಕೂ ಸಿಗುತ್ತದೆ. ಜೊತೆಗೆ ದೈನಂದಿನ ವಿವರಗಳೂ ಲಭ್ಯ. ವಾಯುವಿನ ಗುಣಮಟ್ಟ, ಸೇರಿಕೊಂಡಿರುವ ರಾಸಾಯನಿಕ ಅಂಶಗಳು ಮತ್ತಿತರ ಮಾಹಿತಿಗಳು ಈ ವೆಬ್‌ಸೈಟ್‌ನಲ್ಲಿ ಇರುತ್ತದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆ ಮತ್ತು ನಗರ ಪ್ರದೇಶಗಳಲ್ಲಿ ಹೊರ ವರ್ತುಲ ಹೆದ್ದಾರಿಗಳಂತಹ ಹೈಪರ್‌ಲೋಕಲ್ ಬೆಳವಣಿಗೆಗಳು ಮಾಲಿನ್ಯ ನಿಯಂತ್ರಣದಲ್ಲಿ ಸಕಾರಾತ್ಮಕ ಕ್ರಮಗಳಾಗಿವೆ. ವಾಯು ಗುಣಮಟ್ಟದ ನಿರ್ವಹಣೆಯನ್ನು ಏರ್‌ಶೆಡ್ ವಿಧಾನದ ಮೂಲಕ ನಿರಂತರ ರೀತಿಯಲ್ಲಿ ಪರಿಹರಿಸಲು ವೈಜ್ಞಾನಿಕ ವಿಧಾನದ ಅಗತ್ಯವಿದೆ. ಮಾಲಿನ್ಯದ ಪ್ರಮಾಣ ಮತ್ತು ಹವಾಮಾನ ಬದಲಾವಣೆಗಳಿಗೆ ಕಾರಣಗಳನ್ನು ಹುಡುಕಲು ಆಳವಾದ ಸಂಶೋಧನೆಯ ಅಗತ್ಯವಿದೆ. ೨೦೨೨ ಡಿಸೆಂಬರ್‌ನಲ್ಲಿ ಚಳಗಾಲದ ಮಳೆ ತಪ್ಪಿಹೋಗಲು ಕಾರಣ ಏನು ? ಜನವರಿ ಮತ್ತು ಮಾರ್ಚ್‌ನಲ್ಲಿ ಪಿಎಂ ಮಟ್ಟ ಏರಿಕೆ ಹೇಗೆ ಆಗುತ್ತದೆ ಎನ್ನುವ ಬಗ್ಗೆ ಅಧ್ಯಯನ ನಡೆಯಬೇಕಿದೆ.
ಆರತಿ ಕೋಸ್ಲಾ, ನಿರ್ದೇಶಕಿ, ಕ್ಲೈಮೇಟ್ ಟ್ರೆಂಡ್ಸ್
ದೇಶದಲ್ಲೇ ಅತ್ಯಂತ ಶುದ್ಧ ಗಾಳಿ ಹೊಂದಿರುವ ಟಾಪ್ ೧೦ ಸ್ಥಳಗಳಲ್ಲಿ ಮಡಿಕೇರಿಯೂ ಸ್ಥಾನ ಪಡೆದುಕೊಂಡಿರುವುದು ಉತ್ತಮ ಬೆಳವಣಿಗೆ. ವರ್ಷದಿಂದ ವರ್ಷಕ್ಕೆ ವಾಯು ಗುಣಮಟ್ಟ ಏರಿಕೆ ಆಗುತ್ತಿರುವುದೂ ಸ್ವಾಗತಾರ್ಹ. ಹೆಚ್ಚು ಹೆಚ್ಚು ಗಿಡ ನೆಟ್ಟು, ಕಾಡು ಬೆಳೆಸುವುದರಿಂದ ನಾವು ಈ ವಿಷಯದಲ್ಲಿ ಇನ್ನಷ್ಟು ಪ್ರಗತಿ ಸಾಧಿಸಬಹುದು. ಸಾಧ್ಯವಿದ್ದಲೆಲ್ಲಾ ಸೈಕಲ್ ಬಳಸುವ ಮೂಲಕ ಅನಾವಶ್ಯಕ ಮೊಟಾರ್ ವಾಹನ ಬಳಕೆಗೆ ಕಡಿವಾಣ ಹಾಕಿದರೆ ವಾಯು ಗುಣ ಮಟ್ಟ ಹೆಚ್ಚಳಕ್ಕೆ ನಾವೂ ಕೊಡುಗೆ ಕೊಟ್ಟಂತಾಗುತ್ತದೆ.
ಟಿ.ಜಿ. ಪ್ರೇಮಕುಮಾರ್, ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ