

ರಾಯಚೂರು: ಅರಮನೆಯಲ್ಲಿದ್ದ ಸಂಗೀತವನ್ನು ಗುರುಮನೆಗೆ ತಂದು ಅಂಧರಿಗೆ ಸಂಗೀತವನ್ನು ಧಾರೆ ಎರೆದು ಜೀವನ ಕಲ್ಪಿಸಿದ ಮಹಾತ್ಮ ಪಂ.ಪುಟ್ಟರಾಜ ಗವಾಯಿಗಳಾಗಿದ್ದಾರೆ ಎಂದು ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಂ.ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೆ ನಿಮಿತ್ತ ನಗರದ ಸೋಮವಾರಪೇಟೆ ಹಿರೇಮಠದಲ್ಲಿ ಪಂ.ಪುಟ್ಟರಾಜ ಸಾಂಸ್ಕೃತಿಕ ಟ್ರಸ್ಟ್‌ನಿಂದ ಆಯೋಜಿಸಿದ್ದ ಸಂಗೀತ ಸಮ್ಮೇಳನ ಉದ್ಘಾಟಿಸಿ ಶನಿವಾರ ಮಾತನಾಡಿದರು. ಟ್ರಸ್ಟ್‌ನಿಂದ ಸಂಗೀತ ಸಮ್ಮೇಳನ ಆಯೋಜಿಸಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕು ಎಂದರು.
ಪಾಶ್ಚಾತ್ಯ ಸಂಗೀತ ಕಾರ್ಯಕ್ರಮಗಳಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಆದರೆ, ಮೊದಲು ಜನ್ಮ ತಾಳಿದ್ದು ಶಾಸ್ತ್ರೀಯ ಸಂಗೀತ. ಬದಲಾದ ತಂತ್ರಜ್ಞಾನದಿಂದ ಪಾಶ್ಚಾತ್ಯ ಸಂಗೀತ ಹುಟ್ಟಿಕೊಂಡಿದ್ದು, ಶಾಸ್ತ್ರೀಯ ಸಂಗೀತಕ್ಕಿರುವ ಮಹತ್ವ, ಶಕ್ತಿ ಪಾಶ್ಚಾತ್ಯ ಸಂಗೀತಕ್ಕಿಲ್ಲ. ಇಂತಹ ಕಾರ್ಯಕ್ರಮಗಳನ್ನು ಜನರು ಪ್ರೋತ್ಸಾಹಿಸಬೇಕು ಎಂದು ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪಂ.ಪುಟ್ಟರಾಜ ಗವಾಯಿಗಳು ನಾಡಿಗೆ ಕೊಟ್ಟ ಕೊಡುಗೆ ಅಪಾರವಾಗಿದೆ. ಲಕ್ಷಾಂತರ ಅಂಧ ಮತ್ತು ಅನಾಥ ಮಕ್ಕಳ ಬಾಳಿಗೆ ಪುಟ್ಟರಾಜ ಗವಾಯಿಗಳು ಬೆಳಕಾಗಿದ್ದಾರೆ. ಗದಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಲಕ್ಷಾಂತರ ಅಂಧ ಮಕ್ಕಳಿಗೆ ಸಂಗೀತಾಭ್ಯಾಸ ಮಾಡಿಸಲಾಗುತ್ತಿದೆ ಎಂದರು.