'ಪಾಲಿ, ಪ್ರಾಕೃತ ಭಾಷೆಗಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ'

1
Published on

ಮೈಸೂರು: ಕ್ರಿಸ್ತ ಪೂರ್ವದಲ್ಲೇ ಜನಜನಿತವಾಗಿದ್ದ ಪಾಲಿ ಹಾಗೂ ಪ್ರಾಕೃತ ಭಾಷೆಗಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ಸಕಾರಾತ್ಮಕ ಧೋರಣೆ ಹೊಂದಿದೆ ಎಂದು ಗುರುಗ್ರಾಮದ ಅಮಿಟಿ ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್ ಪ್ರೊ.ಉದಯ ನಾರಾಯಣ ಸಿಂಗ್ ಹೇಳಿದರು.
ಭಾರತೀಯ ಭಾಷಾ ಸಂಸ್ಥಾನದಿಂದ ನಗರದಲ್ಲಿ ಆಯೋಜಿಸಿರುವ ಮೂರು ದಿನಗಳ ಭಾರತದ ಶಾಸ್ತ್ರೀಯ ಭಾಷೆಗಳ ರಾಷ್ಟ್ರೀಯ ಸಮ್ಮೇಳನಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ಶಾಸ್ತ್ರೀಯ ಭಾಷಾ ಸ್ಥಾನಮಾನ ಪಡೆಯುವ ನಿಟ್ಟಿನಲ್ಲಿ ಯಾವ ಮಾನದಂಡಗಳನ್ನು ಪಾಲಿಸಬೇಕೋ, ಅವುಗಳನ್ನು ದಾಖಲೆಗಳ ಮೂಲಕ ಒದಗಿಸಿವೆ. ಈ ಮಧ್ಯೆ ಕ್ರಿಸ್ತ ಪೂರ್ವದಲ್ಲೇ ಜನಜನಿತವಾಗಿದ್ದ ಪಾಲಿ ಹಾಗೂ ಪ್ರಾಕೃತ ಭಾಷೆಗಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ಸಕಾರಾತ್ಮಕ ಧೋರಣೆ ಹೊಂದಿದೆ. ಇದರೊಂದಿಗೆ ಮೈಥಿಲಿ ಭಾಷೆಗೆ ಏಕೆ ಶಾಸ್ತ್ರೀಯ ಸ್ಥಾನಮಾನ ಸಿಗಬಾರದು ಎನ್ನುವ ಮಾತುಗಳು ಸಹಜವಾಗಿಯೇ ಕೇಳಿಬರುತ್ತವೆ ಎಂದು ತಿಳಿಸಿದರು.
ಅಸ್ಸಾಂ, ಪಶ್ಚಿಮ ಬಂಗಾಳ ತಮ್ಮ ಭಾಷೆಯ ಇತಿಹಾಸ, ಸಾಹಿತ್ಯದ ಬೆಳವಣಿಗೆ ಸೇರಿದಂತೆ ಇನ್ನಿತರ ಅಂಶಗಳ ಕುರಿತು ವಿಸ್ತೃತ ವರದಿಯನ್ನು ಸಿದ್ಧಗೊಳಿಸಿ ಕೇಂದ್ರ ಸರ್ಕಾರಕ್ಕೆೆ ನೀಡಿದ್ದಾರೆ. ಈ ಎರಡು ರಾಜ್ಯಗಳ ದಾಖಲೆಗಳನ್ನು ಸಮಿತಿಯು ವೀಕ್ಷಣೆ ಮಾಡಿದೆ. ಮುಂದೆ ಕೇಂದ್ರ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂದು ನೋಡಬೇಕಿದೆ ಎಂದರು.
ಒಂದು ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಕೊಡಬೇಕಾದರೆ ಕೇಂದ್ರ ಸರ್ಕಾರವು ಅನೇಕ ವಿಷಯಗಳಿಗೆ ಬದ್ಧತೆ ತೋರಬೇಕಾಗುತ್ತದೆ. ಆ ಭಾಷೆಯ ಬೆಳವಣಿಗೆ, ಸಂಶೋಧನೆಗೆ ಅನುದಾನವನ್ನು ಮೀಸಲಿಡಬೇಕಾಗುತ್ತದೆ. ಅಲ್ಲದೆ ಕಟ್ಟಡ-ಕಚೇರಿ, ಸಿಬ್ಬಂದಿ, ಸಂಪನ್ಮೂಲ ವ್ಯಕ್ತಿ ಎಲ್ಲವನ್ನೂ ವ್ಯವಸ್ಥೆೆ ಮಾಡಬೇಕಾಗಿರುತ್ತದೆ ಎಂದು ಹೇಳಿದರು.
ಆದ್ದರಿಂದ ಸ್ಥಾನಮಾನ ನೀಡುವ ವಿಚಾರ ಸರ್ಕಾರದ್ದೇ ಆಗಿರುತ್ತದೆ. ಭಾಷೆಗಳ ಬಗ್ಗೆೆ ತಿಳಿದುಕೊಳ್ಳಲು ನಮ್ಮ ದೇಶದಲ್ಲಿ ಪುರಾತನ ಕಾಲದ ಹಸ್ತಪ್ರತಿಗಳು, ಶಾಸನಗಳು, ಗೋಡೆ ಬರಹಗಳು ಯಥೇಚ್ಛವಾಗಿ ಲಭ್ಯವಿವೆ. ಆದರೆ ಅವುಗಳನ್ನು ಸಮರ್ಪಕವಾಗಿ ಹುಡುಕಿ, ಕೂಲಂಕಷವಾಗಿ ಸಂಶೋಧನೆ ನಡೆಸಿ, ಅವುಗಳಲ್ಲಿ ಇರುವ ಮಾಹಿತಿಯನ್ನು ಸಂಗ್ರಹ ಮಾಡುವಂತಹ ಕೆಲಸ ಪ್ರಸ್ತುತದಲ್ಲಿ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅರುಣಾಚಲ ಪ್ರದೇಶದ ಹಳ್ಳಿಯೊಂದರಲ್ಲಿ ಪ್ರಾಚೀನ ಇತಿಹಾಸ ಕಾಲದ ನೂರಾರು ಹಸ್ತಪ್ರತಿಗಳನ್ನು ಮನೆ-ಮನೆಯಲ್ಲಿ ಸಂರಕ್ಷಿಸಿ ಇಟ್ಟಿದ್ದಾರೆ. ಅವರಿಗೆ ಅದನ್ನು ಮುದ್ರಿಸಿ, ಪ್ರಕಟಿಸಬೇಕು ಎನ್ನುವ ಮಹತ್ವ ತಿಳಿದಿಲ್ಲ. ಆದರೆ ಅವುಗಳಲ್ಲಿ ಹಲವು ಕಾಯಿಲೆಗಳಿಗೆ ಔಷಧಗಳ ಬಗ್ಗೆೆ ಮಾಹಿತಿ ಇದೆ. ಇಂತಹವುಗಳನ್ನು ಹುಡುಕುವ ಕೆಲಸವಾಗಬೇಕು. ತನ್ಮೂಲಕ ಭಾಷಾ ಬೆಳವಣಿಗೆ, ಭಾಷಾ ಸಂಶೋಧನೆಯಾಗಬೇಕು ಎಂದು ಸಲಹೆ ನೀಡಿದರು.
ಕೇಂದ್ರೀಯ ಸಂಸ್ಕೃತ ವಿವಿ ಕುಲಪತಿ ಪ್ರೊ.ಶ್ರೀನಿವಾಸ ವರಖೇಡಿ ಮಾತನಾಡಿ, ಶಾಸ್ತ್ರೀಯ ಭಾಷಾ ಸ್ಥಾನಮಾನ ಪಡೆಯುವ ವೇಳೆ ಇದ್ದ ಉತ್ಸಾಹ, ಕಾಳಜಿ ಈಗ ಇಲ್ಲ. ಸ್ಥಾನಮಾನ ಪಡೆದ ಬಳಿಕ ಎಷ್ಟು ಶಿಕ್ಷಣ ಸಂಸ್ಥೆೆಗಳಲ್ಲಿ ಕಾರ್ಯ ಚಟುವಟಿಕೆ ನಡೆಯುತ್ತಿದೆ. ಎಷ್ಟು ವಿದ್ಯಾರ್ಥಿಗಳು ಇದ್ದಾರೆ, ಎಷ್ಟು ಸಂಶೋಧಕರು ಇದ್ದಾರೆ ಎಂದು ಪ್ರಶ್ನಿಸಿದರು.
ಭಾಷಾ ವಿಷಯವಾಗಿ ಸಂಶೋಧನೆಗಳು ಹಾಗೂ ಬರಹಗಳು ಎಷ್ಟು ಹೊರಬಂದಿವೆ ಎನ್ನುವುದನ್ನು ಗಮನಿಸಿದರೆ ಫಲಿತಾಂಶ ಸಮಾಧಾನಕರವಾಗಿಲ್ಲ. ಭಾಷಾ ಬೆಳವಣಿಗೆ ವಿಷಯದಲ್ಲಿ ಈಗಲೂ ಬದ್ಧತೆಯನ್ನು ತೋರುವ ವಿದ್ಯಾರ್ಥಿಗಳು, ವಿದ್ವಾಂಸರು ಬೇಕಾದಷ್ಟು ಜನರು ಇದ್ದಾರೆ. ಆದರೆ ಅಂತಹವರನ್ನು ಹುಡುಕಿ, ಒಬ್ಬರಿಗೊಬ್ಬರು ಸಂಪರ್ಕ ಸಾಧಿಸುವುದಕ್ಕೆೆ ಸೇತುಬಂಧವಾಗಬೇಕಾಗಿದೆ ಎಂದು ಸಲಹೆ ನೀಡಿದರು.
ಭಾಷೆಗಳ ಸ್ವರೂಪ ಕಾಲ-ಕಾಲಕ್ಕೆೆ ಬದಲಾಗುತ್ತದೆ. ಸಾವಿರ ವರ್ಷದ ಹಿಂದೆ ಇದ್ದ ಕನ್ನಡದ ಸ್ವರೂಪ ಈಗಿಲ್ಲ. ಆದರೆ ಅಂದಿನ ಕನ್ನಡದಲ್ಲಿ ಬಂದಿರುವ ವಿಷಯಗಳನ್ನು ಈಗಿನ ಕನ್ನಡದಲ್ಲಿ ತಿಳಿಸುವಂತಹ ಕೆಲಸವಾಗಬೇಕಾಗಿದೆ ಎಂದರು.
ಸಿಐಐಎಲ್ ನಿರ್ದೇಶಕ ಪ್ರೊ.ಶೈಲೇಂದ್ರ ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ನಿರ್ದೇಶಕ ಡಾ.ಪಂಕಜ್ ದ್ವಿವೇದಿ, ಸಮ್ಮೇಳನದ ಸಂಯೋಜಕ ಡಾ.ಎಲ್.ಆರ್.ಪ್ರೇಮಕುಮಾರ್, ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net