

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳ ಮನಸ್ಥಿತಿ ಅರಿತು ಪಾಠ ಬೋಧನೆ ಮಾಡುವ ಶಾಸ್ತ್ರೀಯ ಜ್ಞಾನ ಶಿಕ್ಷಕರಲ್ಲಿರಬೇಕು. ಎಸ್.ಜಿ. ನಾಡಗೀರ ಅಂತಹ ಅಪರೂಪದ ಅನುಕರಣೀಯ ಶಿಕ್ಷಕರಾಗಿದ್ದರು ಎಂದು ಡಾ. ಆನಂದ ಪಾಂಡುರಂಗಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಎಸ್.ಜಿ. ನಾಡಗೀರ ಸ್ಮರಣಾರ್ಥ ದತ್ತಿ ನಿಮಿತ್ತ ಇತ್ತೀಚೆಗೆ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ವ್ಯಕ್ತಿತ್ವ ವಿಕಸನದಲ್ಲಿ ಮನೋಭೂಮಿಕೆ ಕುರಿತು ಮಾತನಾಡಿದರು.
ಎಸ್.ಜಿ. ನಾಡಗೀರ ಆದರ್ಶ ಶಿಕ್ಷಕರಾಗಿ ಕೆ.ಇ.ಬೋರ್ಡ್ ಶಾಲೆಯನ್ನು ಮುನ್ನಡೆಸಿ ಶಿಕ್ಷಣದಲ್ಲಿ ಗುಣಾತ್ಮಕ ಬದಲಾವಣೆ ತಂದವರು. ಮಕ್ಕಳ ಆಸಕ್ತಿ, ಅಭಿರುಚಿಗಳನ್ನು ಗಮನಿಸಿ ಅವರ ಭಾವನೆಗಳನ್ನು ಅರಳಿಸಿ ಪಾಠ ಮಾಡುವ ಕೌಶಲ ಹಾಗೂ ತಂತ್ರ ಹೊಂದಿದ್ದರು. ಅವರ ಬೋಧನೆಯು ಚಟುವಟಿಕೆ ಆಧಾರಿತವಾಗಿತ್ತು. ಇದರಿಂದ ಮಕ್ಕಳು ಒತ್ತಡ, ಖಿನ್ನತೆಯಿಂದ ಮುಕ್ತರಾಗಲು ಸಾಧ್ಯವಿತ್ತು. ಸಾಧನೆಗೆ ಮಾನಸಿಕ ಆರೋಗ್ಯ ಮುಖ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಅರುಣ ನಾಡಗೀರ ಮಾತನಾಡಿ, ಪ್ರಾಥಮಿಕ ಹಾಗೂ ಪ್ರೌಢ ಹಂತವೇ ಶಿಕ್ಷಣದ ಮೂಲ ಬುನಾದಿ. ನಾಡಗೀರ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯತೆಗಳನ್ನು ಒದಗಿಸಿದ್ದರು. ಡಾ. ಆನಂದ ಪಾಂಡುರಂಗಿ ನಾಡಗೀರ ಅವರ ಜತೆಗೆ ನಿಕಟ ಸಂಪರ್ಕ ಉಳ್ಳವರಾಗಿದ್ದರು. ಒಂದು ರೀತಿ ಅವರ ಮಾನಸ ಪುತ್ರರಂತಿದ್ದರು ಎಂದರು.
ಬಸವಪ್ರಭು ಹೊಸಕೇರಿ, ಡಾ. ಸಂಜೀವ ಕುಲಕರ್ಣಿ, ಜಿ. ಸಿ. ತಲ್ಲೂರ, ನಿಂಗಣ್ಣ ಕುಂಟಿ, ಬಿ.ಎಸ್. ಶಿರೋಳ, ಮೋಹನ ಸಿದ್ಧಾಂತಿ, ಹರ್ಷ ಡಂಬಳ, ಜಿ.ಬಿ. ಸಜ್ಜನ, ಬಿ.ಎಂ. ಕೋಟಿಗೌಡ್ರ, ಇತರರು ಇದ್ದರು.
ಡಾ. ಧನವಂತ ಹಾಜವಗೋಳ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಗುರು ಹಿರೇಮಠ ವಂದಿಸಿದರು.