

ಮಂಗಳೂರು: ಪದವಿ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳು ನ.17ರಿಂದ ಆರಂಭಗೊಳ್ಳಲಿವೆ ಎಂದು ದ.ಕ ಜಿಲ್ಲಾ ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪಾ ತಿಳಿಸಿದರು.
ದ.ಕ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮಂಗಳೂರು ವಿ.ವಿ., ಖಾಸಗಿ ವಿ.ವಿ., ಸರ್ಕಾರಿ ತಾಂತ್ರಿಕ, ಡಿಪ್ಲೊಮಾ, ಅನುದಾನ, ಅನುದಾನ ರಹಿತ ಕಾಲೇಜುಗಳನ್ನು ಆರಂಭಿಸುವ ಮಾರ್ಗಸೂಚಿ ಕುರಿತ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಂಗಳೂರು ವಿ.ವಿ ವ್ಯಾಪ್ತಿಯಲ್ಲಿ ಬರುವ ಅಂತಿಮ ವರ್ಷದ ಪದವಿ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳನ್ನು ನ.17ರಿಂದ ಸರ್ಕಾರದ ಮಾರ್ಗಸೂಚಿ ಪಾಲಿಸುವುದರೊಂದಿಗೆ ಪ್ರಾರಂಭಿಸಬೇಕು ಎಂದರು.
ಪ್ರತಿದಿನ ಕಾಲೇಜು ಪ್ರವೇಶಕ್ಕೆ ವಿದ್ಯಾರ್ಥಿಗಳು ಹಾಜರಾಗಲು ವಿದ್ಯಾರ್ಥಿಗಳ ಗುಂಪನ್ನು ವಿಂಗಡಣೆ ಶೇ.50 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಮಾಡಿಕೊಡಬೇಕು. ಪ್ರಥಮ, ದ್ವಿತೀಯ, ಪದವಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸಬೇಕು. ತರಗತಿಗೆ ಹಾಜರಾಗುವ ಬೋಧಕರು, ವಿದ್ಯಾರ್ಥಿಗಳು ಹಾಗೂ ಇತರ ಸಿಬ್ಬಂದಿ ಕಡ್ಡಾಯವಾಗಿ 3 ದಿನಗಳ ಮುಂಚಿತವಾಗಿ ಕೋವಿಡ್-19 ಪರೀಕ್ಷೆ ಮಾಡಿಸಬೇಕು. ಪರೀಕ್ಷಾ ವರದಿ ನೆಗೆಟಿವ್ ಇದ್ದರೆ ಮಾತ್ರ ಕಾಲೇಜುಗಳಿಗೆ ಹಾಜರಾಗಬೇಕು. ಯಾವುದೇ ಆರೋಗ್ಯ ಸಮಸ್ಯೆ ಕಂಡುಬಂದಲ್ಲಿ 1077ನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.
ತರಗತಿಗಳಿಗೆ ವಿದ್ಯಾರ್ಥಿಗಳು ಕಡ್ಡಾಯವಾಗಿ ಹಾಜರಾಗಬೇಕಾಗಿಲ್ಲ. ಹಾಜರಾಗಲು ಇಚ್ಛಿಸದ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಲ್ಲಿ ಪಾಲ್ಗೊಳ್ಳಬಹುದು. ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಬಯಸುವ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಬಗ್ಗೆ ಇರುವ ಅನುಮಾನ ಅಥವಾ ಸಮಸ್ಯೆ ಬಗೆಹರಿಸಿ ಪ್ರತಿ ದಿನ ಆನ್‌ಲೈನ್ ತರಗತಿಗಳನ್ನು ನಡೆಸಬೇಕು. ವಿದ್ಯಾರ್ಥಿಗಳು ಕಡ್ಡಾಯವಾಗಿ ಕಾಲೇಜು ಪ್ರವೇಶ ಹಾಗೂ ನಿರ್ಗಮನ ಸ್ಥಳಗಳಲ್ಲಿ ಥರ್ಮಲ್ ಸ್ಕಾೃನಿಂಗ್, ಸ್ಯಾನಿಟೈಸರ್‌ಗಳ ವ್ಯವಸ್ಥೆ ಕಲ್ಪಿಸಬೇಕು. ಭೋದಕ, ಭೋದಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಕೋವಿಡ್ ಲಕ್ಷಣದ ಸಿಬ್ಬಂದಿಗೆ ಅವಕಾಶವಿಲ್ಲ: ಜ್ವರ, ಕೆಮ್ಮು, ಉಸಿರಾಟದ ಲಕ್ಷಣಗಳನ್ನು ಹೊಂದಿರುವ ಯಾವುದೇ ಭೋದಕ, ಭೋದಕೇತರ ಸಿಬ್ಬಂದಿಗೆ ಶಿಕ್ಷಣ ಸಂಸ್ಥೆಯ ಆವರಣದೊಳಗೆ ಪ್ರವೇಶ ನೀಡುವಂತಿಲ್ಲ. ಸಂಸ್ಥೆಯ ಸಂಪೂರ್ಣ ಕಟ್ಟಡ, ಮುಖ್ಯದ್ವಾರ, ಶೌಚಗೃಹ, ಎಲ್ಲ ಕೊಠಡಿ, ಪೀಠೋಪಕರಣ ಮತ್ತು ಪಠ್ಯ ಸಾಮಗ್ರಿಗಳನ್ನು ದಿನನಿತ್ಯ ಸ್ಯಾನಿಟೈಸ್ ಮಾಡಿಸಬೇಕು. ವಿದ್ಯಾರ್ಥಿಗಳು ಕಡ್ಡಾಯವಾಗಿ ಮನೆಯಿಂದಲೇ ಊಟ, ಕುಡಿಯುವ ನೀರು. ಪೆನ್ನು-ಪುಸ್ತಕ, ಲ್ಯಾಪ್‌ಟ್ಯಾಪ್ ಯಾವುದೇ ವಸ್ತುಗಳನ್ನು ಪರಸ್ಪರ ಹಂಚಿಕೊಳ್ಳುವಂತಿಲ್ಲ .ಲೈಬ್ರೆರಿ, ಕ್ಯಾಂಟೀನ್‌ಗಳನ್ನು ತೆರೆಯುವಂತಿಲ್ಲ ಎಂದು ಅವರು ತಿಳಿಸಿದರು.
ಕಾಲೇಜಿನ ಆವರಣದಲ್ಲಿ ಎಲ್ಲೆಂದರಲ್ಲಿ ಉಗುಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು, ವಿದ್ಯಾರ್ಥಿಗಳು, ಉಪನ್ಯಾಸಕರು ಆರೋಗ್ಯ ಸೇತು ಆ್ಯಪ್ ಅನ್ನು ತಮ್ಮ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಬೇಕು. ಕೋವಿಡ್ ಸಂಬಂಧಿಸಿದ ಮಾರ್ಗಸೂಚಿಗಳನ್ನು ಹಾಗೂ ಮುಂಜಾಗೃತಾ ಕ್ರಮ ಭಿತ್ತಿಪತ್ರಗಳನ್ನು ಸೂಚನ ಫಲಕಗಳಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಸೇವಾಸಿಂಧು ವೆಬ್‌ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕ ಬಸ್‌ಪಾಸ್ ಪಡೆಯಬಹುದು. ಶಿಕ್ಷಕರು, ಅಧಿಕಾರಿ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಧರಿಸಿಕೊಳ್ಳಬೇಕು ಎಂದರು.
ದ.ಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮಚಂದ್ರ ಬಾಯರಿ, ವಿಶೇಷ ಅಧಿಕಾರಿ ಶ್ರೀಧರ್, ರಥಬೀದಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜಶೇಖರ್ ಹೆಬ್ಬಾರ್, ವಿವಿಧ ಖಾಸಗಿ, ಸರ್ಕಾರಿ ಕಾಲೇಜು ಪ್ರಾಂಶುಪಾಲರು ಉಪಸ್ಥಿತರಿದ್ದರು.