ತರಗತಿ ಬಹಿಷ್ಕರಿಸಿದ ವಿದ್ಯಾರ್ಥಿಗಳು

22 HATTI 01
ಹಟ್ಟಿಚಿನ್ನದಗಣಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಮೂಲ ಸೌಕರ್ಯ ಕಲ್ಪಿಸಲು ಆಗ್ರಹಿಸಿ ವಿದ್ಯಾರ್ಥಿಗಳು ಅನಿರ್ದಿಷ್ಟಾವಧಿ ಧರಣಿ ನಡೆಸಿದರು. ಎಸ್‌ಎಫ್‌ಐ ತಾಲೂಕು ಅಧ್ಯಕ್ಷ ಗೊವೀಂದ, ಚನ್ನಬಸವ ನಿಲೋಗಲ್, ಮುಖಂಡರಾದ ಶಂಶುದ್ದೀನ್ ಔಟಿ, ರಿಯಾಜ್, ನಿಂಗಪ್ಪ.ಎಂ, ಹಾಜಿಬಾಬಾ ಕಟ್ಟಿಮನಿ, ಖಾಜಾ ಮೈನುದ್ದೀನ್ ಇತರರಿದ್ದರು.
Published on

ಹಟ್ಟಿಚಿನ್ನದಗಣಿ: ಪಟ್ಟಣ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಕಾಲೇಜು ಆವರಣದಲ್ಲಿ ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಂಡು ಆಕ್ರೋಶ ವ್ಯಕ್ತಪಡಿಸಿದಿರು.

ಭಾರತ ವಿದ್ಯಾರ್ಥಿ ಫೆಡರೇಷನ್ ಜಿಲ್ಲಾಧ್ಯಕ್ಷ ರಮೇಶ ವೀರಾಪೂರ ಮಾತನಾಡಿ, ಹಟ್ಟಿ ಕ್ಯಾಂಪ್‌ನಲ್ಲಿರುವ ಪದವಿ ಪೂರ್ವ ಕಾಲೇಜು ಕಟ್ಟಡ ಸಂಪೂರ್ಣವಾಗಿ ಶಿಥಿಲಾವಸ್ಥೆ ತಲುಪಿದ್ದು, ಗೊಡೆಗಳು ವಿದ್ಯಾರ್ಥಿಗಳ ಮೇಲೆ ಬಿದ್ದು ಅಪಾಯ ಸಂಭವಿಸುವ ಲಕ್ಷಣಗಳಿವೆ. ಕಾಲೇಜಿನಲ್ಲಿ ಶೌಚಗೃಹ ಇಲ್ಲದೇ ವಿದ್ಯಾರ್ಥಿಗಳು ನಿತ್ಯ ನರಕಯಾತನೆ ಅನುಭವಿಸಬೇಕಾಗಿದೆ. ಉತ್ತಮವಾಗಿ ಬೋಧನೆ ಮಾಡುತ್ತಿದ್ದ ಶಿಕ್ಷಕರನ್ನು ಎರವಲು ಸೇವೆಗೆ ಕಳುಹಿಸಿದ್ದರಿಂದ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಶಾಸಕ ಮಾನಪ್ಪ ವಜ್ಜಲ್ ಕೂಡಲೇ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದರು.

ಡಿವೈಎಫ್‌ಐ ಮುಖಂಡ ಕಾಶಿಪತಿ ಮಾತನಾಡಿ, ಕಾಲೇಜಿನಲ್ಲಿ ಕಷ್ಟಗಳನ್ನು ಹೇಳಿಕೊಳ್ಳಲು ಕಾಲೇಜು ಅಭಿವೃದ್ಧಿ ಸಮಿತಿ ಇಲ್ಲ. ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಾಸಕ ಮಾನಪ್ಪ ವಜ್ಜಲ್ ಈವರೆಗೂ ಕಾಲೇಜಿಗೆ ಭೇಟಿ ನೀಡಿಲ್ಲ. ಇದರಿಂದ ವಿದ್ಯಾರ್ಥಿಗಳ ಗೋಳು ಕೇಳೋರು ಯಾರು ಎಂಬಂತಾಗಿದೆ. ಪಿಯುಸಿ ವಿಜ್ಞಾನ ವಿಭಾಗದ ಪ್ರಯೋಗಾಯದ ಸಾಮಾಗ್ರಿಗಳ ನಿರ್ವಹಣೆಗೆ ಹುದ್ದೆ ಖಾಲಿ ಇದ್ದು ಕೂಡಲೇ ಸಿಬ್ಬಂದಿ ನೇಮಕ ಮಾಡಬೇಕು.

ಊಟಿ, ಗಾಣದಾಳ, ರೋಡಲಬಂಡಾ, ವಂದಿ ಹೊಸೂರು, ಮೇದಿನಾಪೂರು, ಆನ್ವರಿ, ಪಾಮನಕಲ್ಲೂರು, ತವಗ, ಕಡೋಣ ಸೇರಿದಂತೆ ಹಲವು ಊರುಗಳಿಂದ ವಿದ್ಯಾರ್ಥಿಗಳು ಕಾಲೇಜಿಗೆ ಬರಬೇಕಾದರೆ ಸರಿಯಾದ ಸಮಯಕ್ಕೆ ಬಸ್‌ಗಳ ವ್ಯವಸ್ಥೆ ಕೈಗೊಳ್ಳಬೇಕು ಎಂದರು.

ಪ್ರತಿಭಟನಾ ಸ್ಥಳಕ್ಕೆ ಡಿಡಿಪಿಯು ಬಸಪ್ಪ ಕೊಟ್ಟೂರು ಆಗಮಿಸಿ ಮನವಿ ಸ್ವೀಕರಿಸಿ ವಾರದೊಳಗೆ ಪರಿಹರಿಸುವುದಾಗಿ ಭರವಸೆ ನೀಡಿದರೂ ಸಹ ಶಾಸಕ ಮಾನಪ್ಪ ವಜ್ಜಲ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಸಮಸ್ಯೆಗಳನ್ನು ಪರಿಹರಿಸುವವರೆಗೆ ಧರಣಿ ಮುಂದುವರೆಸುವುದಾಗಿ ಹೇಳಿದರು.

ವಿದಾರ್ಥಿಗಳಾದ ಮಹಾಂತೇಶ, ವಿದ್ಯಾರ್ಥಿಗಳಾದ ನರಸಮ್ಮ, ರೂಪಾ, ತನುಶ್ರೀ, ತಬುಸುಮ್, ರೇಣುಕಾ, ಸಲ್ಲಾವುದ್ದೀನ್, ಜೈನೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net