

ತರೀಕೆರೆ: ಕರ್ತವ್ಯನಿರತ ಶಿಕ್ಷಕರ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರು ಹಾಗೂ ಪದಾಧಿಕಾರಿಗಳು ಬಿಇಒ ಕಚೇರಿ ವ್ಯವಸ್ಥಾಪಕ ಸಂತೋಷ್ ಕುಮಾರ್ ಮತ್ತು ತಹಸೀಲ್ದಾರ್ ವಿ.ಎಸ್.ರಾಜೀವ್‌ಗೆ ಮನವಿ ಸಲ್ಲಿಸಿದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ವಿ.ರವಿ ಮಾತನಾಡಿ, ಕಳೆದ ಆರೇಳು ವರ್ಷಗಳಿಂದ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಅಳವಡಿಸಿರುವ ಅವೈಜ್ಞಾನಿಕ ಅಂಶಗಳಿಂದ ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೇವಾ ನಿರತ ಪದವೀಧರ ಶಿಕ್ಷಕರಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು.
ಸರ್ಕಾರ ಎನ್‌ಸಿಟಿಇ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯ ಶಿಾರಸ್ಸುಗಳಿಗೆ ಅನುಕೂಲವಾಗುವಂತೆ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಯ ಪದನಾಮ ಬದಲಾಯಿಸಿದ್ದಲ್ಲದೇ, ಹೊಸ ವೃಂದ ಮತ್ತು ವೃಂದ ಬಲ ನಿರ್ಧರಿಸುವ ಕುರಿತು ವಿಶೇಷ ರಾಜ್ಯ ಪತ್ರ ಹೊರಡಿಸಿ 1ರಿಂದ 5ಕ್ಕೆ 1,12,467 ಹಾಗೂ 6 ರಿಂದ 8 ವರೆಗೆ 51,781 ಹುದ್ದೆ ವೃಂದವಾರು ಮಂಜೂರು ಮಾಡಿ ಆದೇಶಿಸಿದೆ. ಇದರಿಂದ 2016ನೇ ಸಾಲಿಗಿಂತ ಮೊದಲು 1 ರಿಂದ 7, 1ರಿಂದ 8ರ ವೃಂದಕ್ಕೆ ನೇಮಕಾತಿ ಪಡೆದ ಎಲ್ಲ ಸಹ ಶಿಕ್ಷಕರಿಗೆ ಭವಿಷ್ಯದ ದೃಷ್ಟಿಯಿಂದ ಸಮಸ್ಯೆ ತಂದೊಡ್ಡಿದೆ ಎಂದು ಆಪಾದಿಸಿದರು.
ಆದ್ದರಿಂದ 2017ರ ಹೊಸ ವೃಂದ ಮತ್ತು ನೇಮಕಾತಿ ನಿಯಮ 2016ಕ್ಕಿಂತ ಮೊದಲು ನೇಮಕಾತಿಯಾದವರಿಗೆ ಪೂರ್ವಾನ್ವಯಗೊಳಿಸಬಾರದು. ಅರ್ಹ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2016ರ ಪೂರ್ವದಂತೆ ಅರ್ಹತೆ ಆಧಾರದಲ್ಲಿ ಪ್ರೌಢಶಾಲೆಗೆ ಬಡ್ತಿ ನೀಡಬೇಕು ಎಂದು ಒತ್ತಾಯಿಸಿದರು. ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಆ 7ರಂದು ಡಿಸಿ, ಡಿಡಿಪಿಐ, ಜಿಪಂ ಸಿಇಒಗೆ ಮನವಿ ಸಲ್ಲಿಸುವ ಜತೆಗೆ ಎಲ್ಲ ಶಿಕ್ಷಕರು 12ರಂದು ತರಗತಿ ಬಹಿಷ್ಕರಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಜ್ಜಂಪುರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ನಾಗರಾಜ್, ತರೀಕೆರೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಅನಂತಪ್ಪ, ಪ್ರಮುಖರಾದ ಎಂ.ಬಿ.ರಾಮಚಂದ್ರಪ್ಪ, ಪುಟ್ಟಸ್ವಾಮಿ, ಆನಂದಪ್ಪ, ಶೈಲಜಾ, ಪುಷ್ಪಾ ಮತ್ತಿತರರಿದ್ದರು.