

ಹಿರೇಕೆರೂರ: ಪಟ್ಟಣದ ತಂಬಾಕದ ನಗರದ ಕಾರ್ವಿುಕ ಭವನದ ಹಿಂಭಾಗದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ಮಳೆಗಾಲದಲ್ಲಿ ಸಿಮೆಂಟ್ ತಗಡುಗಳು ಸೋರುತ್ತವೆ. ಪ್ರತ್ಯೇಕ ಬೋಧನಾ ಕೊಠಡಿ, ಮುಖ್ಯ ಶಿಕ್ಷಕರ ಕಚೇರಿ, ಪ್ರತ್ಯೇಕ ಅಡುಗೆ ಕೋಣೆ ಇಲ್ಲದೆ ಮಕ್ಕಳ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
2006-07ರಲ್ಲಿ ಆರಂಭಗೊಂಡಿರುವ ಶಾಲೆ ಇದೀಗ ಮುಚ್ಚುವ ಹಂತ ತಲುಪಿದೆ. ಹಲವು ಏಳು-ಬೀಳು, ಸಮಸ್ಯೆಗಳ ಮಧ್ಯೆಯೂ ಶಾಲೆ ಕಾರ್ಯನಿರ್ವಹಿಸುತ್ತಿದೆ. ಶಾಲೆಗೆ ಸ್ವಂತ ಸ್ಥಳವಿಲ್ಲ, ಗೋದಾಮಿನಂತಿರುವ ಒಂದೇ ಕೊಠಡಿಯಲ್ಲಿ 1ರಿಂದ 5ನೇ ತರಗತಿವರೆಗೆ ಪಾಠ ಮಾಡಲಾಗುತ್ತಿದೆ. ಅಡುಗೆ, ಕಚೇರಿ, ಆಹಾರ ಸಾಮಗ್ರಿಗಳನ್ನು ಇಲ್ಲಿಯೇ ದಾಸ್ತಾನು ಮಾಡಲಾಗುತ್ತಿದೆ.
ತಂಬಾಕದ ನಗರ, ವಿದ್ಯಾನಗರ, ಅಯ್ಯಪ್ಪಸ್ವಾಮಿ ನಗರ, ಮಂಜುನಾಥ ನಗರ, ರಾಘವೇಂದ್ರ ಕಾಲನಿ, ಬಾಳಂಬೀಡ ಕ್ರಾಸ್ ಹೀಗೆ ವಿವಿಧೆಡೆಯ ಬಡ ವಿದ್ಯಾರ್ಥಿಗಳಿಗೆ ಅನುಕೂಲಕರ ಶಾಲೆ ಇದಾಗಿದ್ದು, ಪ್ರಸಕ್ತ ಸಾಲಿನಲ್ಲಿ ಒಟ್ಟು 36 ಮಕ್ಕಳು ಅಧ್ಯಯನ ಮಾಡುತ್ತಿದ್ದಾರೆ. ಒಬ್ಬರು ಮುಖ್ಯಶಿಕ್ಷಕರು ಸೇರಿ ಮೂವರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.
ಶಾಲಾ ಕಟ್ಟಡದ ಮುಂಭಾಗ ಕಾರ್ವಿುಕ ಭವನ ಮತ್ತು ಇದರ ಸುತ್ತಲೂ ಕಾಂಪೌಂಡ್ ನಿರ್ವಿುಸಿ ಲೋಕಾರ್ಪಣೆಗೊಳಿಸಲಾಗಿದೆ. ಇದರಿಂದ ತಂಬಾಕದ ನಗರ, ಅಯ್ಯಪ್ಪಸ್ವಾಮಿ ನಗರದ ವಿದ್ಯಾರ್ಥಿಗಳಿಗೆ ಓಡಾಡಲು ರಸ್ತೆ ಇಲ್ಲದಂತಾಗಿದೆ. ಚಿಕ್ಕೇರೂರ ರಸ್ತೆ ಮೂಲಕ ಸುತ್ತುಬಳಸಿ ಕಾರ್ವಿುಕ ಭವನದ ಮುಂಭಾಗಕ್ಕೆ ಬರಬೇಕಿದೆ. ಕಾರ್ವಿುಕ ಭವನದ ಹಿಂಭಾಗದಲ್ಲಿ ಚಿಕ್ಕ ಗೇಟ್ ಮಾಡಿ ಹೋಗಿ ಬರಲು ಸಂಪರ್ಕ ಕಲ್ಪಿಸಿದರೆ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಪಾಲಕರು ಅಳಲು ತೋಡಿಕೊಂಡಿದ್ದಾರೆ. ಶಾಲೆ ಇರುವ ಸ್ಥಳ ಕಾರ್ವಿುಕ ಇಲಾಖೆಗೆ ಸಂಬಂಧಿಸಿದ್ದಾಗಿದ್ದು, ಶಿಕ್ಷಣ ಇಲಾಖೆಗೆ ಹಸ್ತಾಂತರವಾಗಿಲ್ಲ.
ಕಾರ್ವಿುಕ ಭವನ ಉದ್ಘಾಟನೆಗೆ ಆಗಮಿಸಿದ್ದ ಸಚಿವ ಸಂತೋಷ ಲಾಡ್ ಹಾಗೂ ಸಂಬಂಧಿಸಿದ ಶಿಕ್ಷಣ ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ಇಲ್ಲಿನ ಸಮಸ್ಯೆ ತಿಳಿಸಲಾಗಿದ್ದರೂ ಯಾವುದೆ ಪ್ರಯೋಜನವಾಗಿಲ್ಲ. ಮಕ್ಕಳ ಅಭ್ಯಾಸದ ಸಮಯದಲ್ಲಿ ಏನಾದರೂ ಅವಘಡ ಸಂಭವಿಸಿದರೆ ಯಾರು ಹೊಣೆ ? ಆದ್ದರಿಂದ ಮೇಲಧಿಕಾರಿಗಳು ಕೂಡಲೇ ಶಾಲೆಗೆ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಶಾಲೆಯಲ್ಲಿ ಉತ್ತಮ ಶಿಕ್ಷಕರಿದ್ದು, ಗುಣಮಟ್ಟದ ಕಲಿಕೆಯಿಂದಾಗಿ ಎರಡು ಮಕ್ಕಳನ್ನು ಸೇರಿಸಿದ್ದೇನೆ. ಕಾರ್ವಿುಕ ಭವನ ನಿರ್ವಣಕ್ಕಿಂತ ಮುಂಚೆ, ಈ ಶಾಲೆಗೆ ಹೋಗಿ ಬರಲು ತಂಬಾಕದ ನಗರದಿಂದ ಹಿಂದೆ ಒಂದು ದಾರಿಯಿತ್ತು. ಅದನ್ನು ಈಗ ಬಂದ್ ಮಾಡಲಾಗಿದೆ. ಬಹಳ ದೂರ ಕ್ರಮಿಸಿ ಶಾಲೆಗೆ ಹೋಗಿ ಬರಬೇಕಿದೆ. ಇದನ್ನು ತಪ್ಪಿಸಲು ಹಿಂದುಗಡೆ ಚಿಕ್ಕ ದಾರಿ ಮಾಡಿಕೊಡಬೇಕು. ಪ್ರತ್ಯೇಕ ಬೋಧನಾ ಕೊಠಡಿ ಇಲ್ಲದಿರುವುದರಿಂದ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತಿದೆ. ಅಡುಗೆ ತಯಾರಿಕೆ ಹಾಗೂ ಪ್ರತ್ಯೇಕವಾಗಿ ಆಹಾರ ಸಾಮಗ್ರಿಗಳ ದಾಸ್ತಾನು ಕೊಠಡಿಗಳು ಹಾಗೂ ಶೌಚಗೃಹವನ್ನೂ ನಿರ್ವಿುಸಬೇಕು. | ಸುರೇಶ ಸವಣೂರ, ವಿದ್ಯಾರ್ಥಿಯ ಪಾಲಕರು
ಪಟ್ಟಣ ಪಂಚಾಯಿತಿಯವರಿಗೆ ಸೂಕ್ತ ನಿವೇಶನ ನೀಡುವಂತೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಅವರು ನಿವೇಶನ ನೀಡಿದರೆ ಅಗತ್ಯವಿರುವ ಮೂಲಸೌಕರ್ಯ ಒದಗಿಸುವ ಮೂಲಕ ಶಾಲೆಯನ್ನು ಎಲ್ಲ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. | ಎನ್. ಶ್ರೀಧರ ಬಿಇಒ, ಹಿರೇಕೆರೂರ