

ಮಂಗಳೂರು: ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳ ನಡುವಿನ ಮಾರಾಮಾರಿ ಮಂಗಳವಾರವೂ ಮುಂದುವರಿದಿದೆ.
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಓರ್ವನಾದ ಚೊಟ್ಟೆ ನೌಷಾದ್ ಮೇಲೆ ಇನ್ನೊಂದು ಬ್ಲಾಕ್‌ನಲ್ಲಿದ್ದ ಕೈದಿಗಳು ಸೋಮವಾರ ಸಂಜೆ ಹಲ್ಲೆ ನಡೆಸಿದ್ದರು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು. ಒಂದು ದಿನ ಕಳೆಯುಷ್ಟರವಲ್ಲಿ ಮತ್ತೆ ಹಲ್ಲೆ ನಡೆದಿದ್ದು, ಇದರಿಂದಾಗಿ ಜೈಲಿನ ಒಳಗಿನ ಪರಿಸ್ಥಿತಿ ಗಂಭೀರವಾಗಿದೆ. ಸಿಬ್ಬಂದಿ ಕೊರತೆಯ ನಡುವೆ ಘರ್ಷಣೆಗಿಳಿಯುವ ಕೈದಿಗಳನ್ನು ನಿಯಂತ್ರಿಸುವುದು ಜೈಲು ಅಧಿಕಾರಿಗಳಿಗೆ ಸವಾಲಾಗಿದೆ.
ಮಂಗಳವಾರ ಹಗಲು ಹೊತ್ತು ಜೈಲಿನ ಅಡುಗೆ ಕೋಣೆಯಲ್ಲಿ ಅಡುಗೆ ಕಾರ್ಯದಲ್ಲಿ ನಿರತನಾಗಿದ್ದ ಕೈದಿಯೋರ್ವನಿಗೆ ಸಹ ಕೈದಿ ಮುನೀರ್ ಎಂಬಾತ ಹೊಡೆದಿದ್ದಾನೆ. ಇದರಿಂದಾಗಿ ಆಕ್ರೋಶಗೊಂಡ ಜೈಲಿನಲ್ಲಿದ್ದ ಇತರ ಕೈದಿಗಳು ಒಟ್ಟಾಗಿ ಮುನೀರ್ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದು, ಜೈಲ್‌ನ ಸಿಬಂದಿ ಆತನನ್ನು ಹಲ್ಲೆಗೆ ಒಳಗಾಗದಂತೆ ತಪ್ಪಿಸಿದ್ದಾರೆ. ಇದರಿಂದ ಜೈಲೊಳಗೆ ಗದ್ದಲದ ವಾತಾವರಣ ಉಂಟಾಯಿತು. ಮಾಹಿತಿ ತಿಳಿಯುತ್ತಿದ್ದಂತೆ ಬರ್ಕೆ ಠಾಣೆ ಪೊಲೀಸರು ಜೈಲ್‌ಗೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೈಲಿನ ಸುತ್ತ ಹೆಚ್ಚುವರಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.