

ಬೆಂಗಳೂರು: ಇಷ್ಟು ದಿನ ಶೀತಲಸಮರದಂತೆ ನಡೆಯುತ್ತಿದ್ದ ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಮತ್ತು ಕುಲಸಚಿವರ ಕಿತ್ತಾಟ ಇದೀಗ ಬಹಿರಂಗಗೊಂಡಿದೆ. ಕುಲಪತಿ ಡಾ. ಕೆ.ಆರ್. ವೇಣುಗೋಪಾಲ್ ಸಂವಿಧಾನ ಬದ್ಧವಾಗಿ ನನಗೆ ಕರ್ತವ್ಯ ನಿರ್ವಹಿಸಲು ಬಿಡುತ್ತಿಲ್ಲ. ಕೇವಲ ತಾವು ಹೇಳಿದ್ದನ್ನು ಮಾತ್ರ ಪಾಲಿಸಬೇಕೆಂದು ಒತ್ತಾಯಿಸಿ ನನ್ನ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸ ಬೇಕು ಎಂದು ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ರಾಜ್ಯಪಾಲರಿಗೆ ಕುಲಸಚಿವೆ ಕೆ. ಜ್ಯೋತಿ ಮನವಿ ಮಾಡಿದ್ದಾರೆ.
ಪತ್ರದಲ್ಲೇನಿದೆ?: ಕುಲಪತಿ ನಡವಳಿಕೆಯಿಂದ ನನ್ನ ಮತ್ತು ನನ್ನ ಕುಟುಂಬಕ್ಕೆ ಬೆದರಿಕೆಯೊಡ್ಡುವ ಪ್ರಯತ್ನಗಳು ನಡೆದಿವೆ. ವಿವಿ ಅಧಿನಿಯಮ ಮತ್ತು ನಿಯಮಾವಳಿ ಅನ್ವಯ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸದಂತೆ ಕುಲಪತಿಗೆ ಕಠಿಣ ಸೂಚನೆ ನೀಡುವಂತೆ ಜ್ಯೋತಿ ಕೋರಿದ್ದಾರೆ. ರಾಜ್ಯಪಾಲರಲ್ಲದೆ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ, ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರಿಗೂ ಪತ್ರ ಬರೆದಿದ್ದಾರೆ. ಅಲ್ಲದೆ, ಜ್ಞಾನಭಾರತಿ ಪೊಲೀಸ್ ಠಾಣೆಗೂ ದೂರಿನ ಪ್ರತಿ ನೀಡಿ ಕುಲಪತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
ಕುಲಸಚಿವರು ಕೂಡ ಬೆಂ.ವಿವಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಮೇಲೆ ತಮ್ಮ ಅಧಿಕಾರ ದರ್ಪ ತೋರಿಸುತ್ತಾರೆ ಎಂಬ ಆರೋಪ ಕೇಳಿಬಂದಿದೆ. ವಿವಿಯ ಅರಣ್ಯ ಸಂಪತ್ತು ಕೊಳ್ಳುಬಾಕರ ಕೈಗೆ ಹೋಗುತ್ತಿದೆ. ರಕ್ಷಣೆ ಮಾಡುವಂತೆ ಮನವಿ ಮಾಡಿದ್ದ ಸಿಬ್ಬಂದಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಇತರರಿಗೆ ತಿಳಿವಳಿಕೆ ಪತ್ರವನ್ನು ನೀಡಿದ್ದಾರೆಂದು ತಿಳಿದುಬಂದಿದೆ.
ಕುಟುಂಬದ ರಕ್ಷಣೆಗೆ ಧಕ್ಕೆ
ವಿವಿ ಅಧಿನಿಯಮಗಳ ವಿರುದ್ಧವಾಗಿ ಕುಲಪತಿ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ವಿವಿ ಆಡಳಿತದಲ್ಲಿ ಕೇವಲ ಕುಲಪತಿ ಆದೇಶ ಪಾಲಿಸಬೇಕೆಂದು ಹೇಳುವ ಮೂಲಕ ಕುಲಸಚಿವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಸಿಬ್ಬಂದಿ ಕರ್ತವ್ಯಲೋಪಗಳಿಗೆ ನೀಡುವ ನೋಟಿಸ್ಗಳನ್ನು ವಾಪಸ್ ಪಡೆದು ಕುಲಸಚಿವ ಹುದ್ದೆಯ ಘನತೆಗೆ ಧಕ್ಕೆ ತರುತ್ತಿದ್ದಾರೆ. ವಿವಿ ಶಿಕ್ಷಕೇತರ ನೌಕರರ ಸಂಘ/ ಅನುಸೂಚಿತ ಜಾತಿ, ಪಂಗಡಗಳ ಶಿಕ್ಷಕೇತರ ಸಂಘಗಳ ಹೆಸರು ಬಳಕೆ ಮಾಡುತ್ತ ನನಗೆ ಬೆದರಿಕೆ ಒಡ್ಡುವಂತಹ ಸೂಚನೆಗಳನ್ನು ಸಿಬ್ಬಂದಿ ಮೂಲಕ ತಿಳಿಸಿ ಭಯದ ವಾತಾವರಣ ಸೃಷ್ಟಿಸಲು ಪ್ರಯತ್ನಿಸಿದ್ದಾರೆ. ಕುಲಪತಿಗಳ ನಡವಳಿಕೆಯಿಂದ ನನ್ನ ಮತ್ತು ನನ್ನ ಕುಟುಂಬದ ರಕ್ಷಣೆಗೆ ಧಕ್ಕೆ ಬರಬಹುದೆಂಬ ಭಾವನೆ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಗಮನಕ್ಕೆ ಈ ವಿಷಯ ತರುತ್ತಿದ್ದೇನೆ ಎಂದು ಕುಲಸಚಿವೆ ಜ್ಯೋತಿ ದೂರಿನಲ್ಲಿ ತಿಳಿಸಿದ್ದಾರೆ.
ನಾನು ಯಾವುದೇ ರೀತಿಯ
ಬೆದರಿಕೆ ಹಾಕಿಲ್ಲ. ಸಿಂಡಿಕೇಟ್ ತೆಗೆದುಕೊಳ್ಳಬೇಕಾದ ತೀರ್ವನಗಳನ್ನು ಕುಲಸಚಿವರು ಹೇಗೆ ತೆಗೆದುಕೊಳ್ಳುತ್ತಾರೆ? ಇದು ಸಾಧ್ಯವಿಲ್ಲ ಎಂದಿದ್ದಕ್ಕೆ ಈ ರೀತಿ ದೂರು ನೀಡಿದ್ದಾರೆ. | ಕೆ.ಆರ್. ವೇಣುಗೋಪಾಲ್ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ