ಸಾಧನೆಗೆ ಗುರಿಯ ಸ್ಪಷ್ಟತೆ ಅಗತ್ಯ

12sri-3
Published on

ಶೃಂಗೇರಿ: ವಿದ್ಯಾರ್ಥಿಗಳು ಚಿಕ್ಕವಯಸ್ಸಿನಲ್ಲಿ ಇಚ್ಛಾಶಕ್ತಿ, ಕರ್ತೃತ್ವ ಶಕ್ತಿಯನ್ನೂ ರೂಢಿಸಿಕೊಳ್ಳಬೇಕು. ಕೇವಲ ಪ್ರಬಲ ಇಚ್ಛೆ ಇದ್ದರೆ ಸಾಲದು. ಅದನ್ನು ಸಾಧಿಸಲು ಬೇಕಾಗಿರುವ ಜ್ಞಾನಶಕ್ತಿ ಬೆಳೆಸಿಕೊಳ್ಳಬೇಕು ಎಂದು ಶ್ರೀಮಠದ ಜಗದ್ಗುರು ಶ್ರೀವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.

ಮೆಣಸೆ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ರಾಜೀವ್ ಗಾಂಧಿ ಪರಿಸರದ 33 ವಾರ್ಷಿಕೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಗೆ ಕ್ರಿಯಾಶಕ್ತಿ ಮುಖ್ಯ.ಅವರಲ್ಲಿ ಗುರಿ ಕುರಿತು ಸ್ಪಷ್ಟತೆ ಇರಬೇಕು. ಆತ್ಮ ವಿಶ್ವಾಸವೂ ಇರಬೇಕು. ಹೆಚ್ಚು ಕ್ರಿಯಾಶೀಲರಾಗಿದ್ದಾಗ ಮಾತ್ರ ಮಾನಸಿಕ ದೃಢತೆ ಹೆಚ್ಚುತ್ತದೆ ಎಂದರು.

ಎನ್‌ಐಒಎಸ್‌ನ ಮಾಜಿ ಅಧ್ಯಕ್ಷ ಪ್ರೋ.ಚಂದ್ರಭೂಷಣ ಮಾತನಾಡಿ, ಸನಾತನಧರ್ಮದ ಶ್ರೇಯೋಭಿವೃದ್ಧಿಗಾಗಿ ಶ್ರೀಶಂಕರಾಚಾರ್ಯ ನೀಡಿದ ಕೊಡುಗೆ ಅನನ್ಯ. ಸಂಸ್ಕೃತ ಭಾಷೆ ಸರಳವಾದ ಭಾಷೆ. ಸಂಸ್ಕೃತ ಭಾಷೆಯನ್ನು ಕಡ್ಡಾಯವಾಗಿ ಪ್ರಾಥಮಿಕ ಶಿಕ್ಷಣದಲ್ಲಿ ಮಕ್ಕಳಿಗೆ ಅರಿವು ಮೂಡಿಸಬೇಕು.ಮಹಾನ್ ಗ್ರಂಥಗಳು ಈ ಭಾಷೆಯಲ್ಲಿ ರೂಪಿತಗೊಂಡಿದೆ. ಯುವಪೀಳಿಗೆ ಸಂಸ್ಕೃತಭಾಷೆಯ ಮೌಲ್ಯಗಳನ್ನು ಅರಿತುಕೊಳ್ಳಬೇಕು ಎಂದರು.

ಪರಿಸರದ ವಾರ್ಷಿಕ ಪತ್ರಿಕೆ ಭಾರತೀ ಯನ್ನು ಜಗದ್ಗುರು ಶ್ರೀವಿಧುಶೇಖರಭಾರತೀ ಸ್ವಾಮೀಜಿ ಬಿಡುಗಡೆಗೊಳಿಸಿದರು. ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪದಕಗಳನ್ನು ನೀಡಿ ಪುರಸ್ಕರಿಸಲಾಯಿತು.ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪ್ರೋ. ಹಂಸಧರ ಝೂ, ಪ್ರೋ. ಚಂದ್ರಕಾಂತ್,ಪ್ರೋ. ಸೂರ್ಯ ನಾರಾಯಣ ಭಟ್, ಡಾ. ವೆಂಕಟೇಶ್ ತಾತಾಚಾರ್ಯ, ಡಾ.ವೆಂಕಟರಮಣ ಭಟ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net