

ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರು ಮತ್ತು ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಬೇಕು ಹಾಗೂ ಮಲೆನಾಡು ಭಾಗದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಪಡಿಸಿ ಮಲೆನಾಡು ರೈತರ ಹೋರಾಟ ಸಮಿತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿದೆ.
ಕಳೆದ ಬಾರಿ ನರೇಂದ್ರ ಮೋದಿ ಅವರು ಶಿವಮೊಗ್ಗಕ್ಕೆ ಭೇಟಿ ನೀಡಿದ್ದಾಗ ಅಡಕೆ ಮಾನ ಉಳಿಸುವ ಜತೆಗೆ ಸಂಶೋಧನಾ ಕೇಂದ್ರ ಆರಂಭಿಸುವ ಭರವಸೆ ನೀಡಿದ್ದರು. ಆದರೆ ಇದುವರೆಗೆ ಭರವಸೆ ಕಾರ್ಯರೂಪಕ್ಕೆ ಬಂದಿಲ್ಲ. ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಇಲ್ಲವಾದರೆ ಜನಾಕ್ರೋಶಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದು ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ತೀ.ನ.ಶ್ರೀನಿವಾಸ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ರಾಜ್ಯ ಸರ್ಕಾರ ಅಡಕೆ ಟಾಸ್ಕ್‌ಫೋರ್ಸ್ ರಚಿಸಿ ಎಂ.ಎಸ್.ರಾಮಯ್ಯ ಕಾಲೇಜಿಗೆ ಸಂಶೋಧನೆ ನಡೆಸಲು ಅನುಮತಿ ನೀಡಿದೆ. ಇದನ್ನು ಪ್ರಧಾನಿ ಅವರು ಈ ಹಿಂದೆ ಚುನಾವಣೆ ಪ್ರಚಾರದ ವೇಳೆ ಬಂದು ಘೋಷಿಸಿ ಹೋಗಿದ್ದರು. ಆದರೆ ಕಣ್ಣೊರೆಸುವ ತಂತ್ರಕ್ಕಾಗಿ ಎಂ.ಎಸ್.ರಾಮಯ್ಯ ಕಾಲೇಜಿಗೆ ಸಂಶೋಧನೆಗೆ ನೀಡಲಾಗಿದೆ ಎಂದು ದೂರಿದರು.
ಸಿಗರೇಟ್ ಲಾಬಿಗೆ ಮಣಿದು ಅಡಕೆ ಉತ್ಪನ್ನಗಳನ್ನ ರದ್ದು ಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದ ಅವರು, ಅಡಕೆ ಹಾನಿಕಾರಕ ಎಂಬ ಆರೋಪದ ಬಗ್ಗೆ ಸಂಶೋಧನೆ ನಡೆಸಿ ಔಷಧೀಯ ಗುಣ ಹೊಂದಿರುವ ಅಡಕೆಯ ಮಾನ ಕಾಪಾಡಬೇಕಿದೆ. ಕೇಂದ್ರ ಸಚಿವ ಅಮಿತ್ ಷಾ ಅವರು ತೀರ್ಥಹಳ್ಳಿಯಲ್ಲಿ ಅಡಕೆ ಬೆಳೆಗಾರರ ಜತೆ ನಡೆಸಿದ ಸಂವಾದದಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದರು. ಸಹ ಸಂಚಾಲಕ ಎಸ್.ಕೃಷ್ಣಮೂರ್ತಿ, ಕುಮಾರನಾಯ್ಕ, ತೀರ್ಥನಾಯ್ಕ, ರವಿನಾಯ್ಕ ಸುದ್ದಿಗೋಷ್ಠಿಯಲ್ಲಿದ್ದರು.