ಮೇಕೆದಾಟು ಯೋಜನೆ ಜಾರಿಗೊಳಿಸಲು ಕಬ್ಬು ಬೆಳೆಗಾರರ ಸಂಘದ ಹಕ್ಕೊತ್ತಾಯ

27
Published on

ಮೈಸೂರು: ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ಹಕ್ಕೊತ್ತಾಯ ಪತ್ರ ಸಲ್ಲಿಸಲಾಯಿತು.

ನಗರದಲ್ಲಿ ವಾಸ್ತವ್ಯ ಹೂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಂಗಳವಾರ ಭೇಟಿ ಮಾಡಿದ ಸಂಘದ ಪದಾಧಿಕಾರಿಗಳು, ವಿಧಾನಸಭೆ ಚುನಾವಣೆ ಪೂರ್ವದಲ್ಲಿ ತಾವು ಪಾದಯಾತ್ರೆ ಮಾಡಿ ಮೇಕೆದಾಟು ಯೋಜನೆ ಪ್ರಾರಂಭಕ್ಕೆ ಸಾಕಷ್ಟು ಒತ್ತಡವನ್ನು ಹಾಕಿದ್ದೀರಿ. ಆದರೆ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದರೂ ಮೇಕೆದಾಟು ಯೋಜನೆ ಪ್ರಾರಂಭ ತಾಂತ್ರಿಕ ಸಮಸ್ಯೆ ಎಂದು ಬಾಕಿ ಉಳಿದಿದೆ ಎಂದು ಹೇಳಿದರು.

ರಾಜ್ಯದ ಎಲ್ಲ ಸಂಸದರನ್ನು ಒಟ್ಟುಗೂಡಿಸಿ ಸಭೆ ನಡೆಸಿ ಮೈಸೂರು, ಬೆಂಗಳೂರು ಸೇರಿದಂತೆ ಗ್ರಾಮಾಂತರ ಭಾಗಕ್ಕೆ ಕುಡಿಯುವ ನೀರು, ಕೆರೆ ತುಂಬಿಸಿ ಅಂತರ್ಜಲ ವೃದ್ಧಿಗಾಗಿ ಬರಗಾಲ ಸಂದರ್ಭದಲ್ಲಿ ರಾಜ್ಯದ ರೈತರ ಹಿತ ದೃಷ್ಟಿಯಿಂದ ಮೇಕೆದಾಟು ಯೋಜನೆ ಪ್ರಾರಂಭ ಮಾಡುವುದು ಅತ್ಯವಶ್ಯಕವಾಗಿದೆ ಎಂದರು.

ರಾಜ್ಯದ ಜನರ ಹಿತದೃಷ್ಟಿಯಿಂದ ಮೇಕೆದಾಟು ಜಲಾಶಯ ಯೋಜನೆಯ ಮೂಲ ಸ್ಥಳದಲ್ಲಿ ಕಾಮಗಾರಿಯನ್ನು ಪ್ರಾರಂಭ ಮಾಡಲು ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರದಿಂದ ಮತ್ತು ಪರಿಸರ ಇಲಾಖೆಯಿಂದ ಬೇಕಾದಂತಹ ಸಹಕಾರವನ್ನು ಪಡೆಯಲು ರಾಜ್ಯದ ರೈತ ಸಂಘಟನೆಗಳ ಒಕ್ಕೂಟದ ಮೂಲಕ ನಿಯೋಗವನ್ನು ಕರೆದುಕೊಂಡು ಹೋಗಿ ಮನವರಿಕೆ ಮಾಡಿ. ಈ ಮೂಲಕ ರಾಜ್ಯದಲ್ಲಿ ಮೇಕೆದಾಟು ಯೋಜನೆಗೆ ಕ್ರಮ ಕೈಗೊಳ್ಳಲು ಹಕ್ಕೊತ್ತಾಯ ಮಾಡಬೇಕು ಎಂದು ಕೋರಲಾಯಿತು.

ನಿಯೋಗದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲೆಯೂರು ಹರ್ಷ, ಚಾಮರಾಜನಗರ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್, ಗೌರವಾಧ್ಯಕ್ಷ ಶಿವರುದ್ರಪ್ಪ, ಮೈಸೂರು ಜಿಲ್ಲಾ ಖಜಾಂಚಿ ಹೊಸಪುರ ಮಾದಪ್ಪ, ಜಿಲ್ಲಾ ಉಪಾಧ್ಯಕ್ಷ ಮಲೆಯೂರು ಪ್ರವೀಣ್, ತಾಲೂಕು ಅಧ್ಯಕ್ಷ ಅಂಬಳೆ ಮಹದೇವಸ್ವಾಮಿ, ಚಾಮರಾಜನಗರ ತಾಲೂಕು ಅಧ್ಯಕ್ಷ ಅರಳಿಕಟ್ಟೆ ಕುಮಾರ್, ತಾಲೂಕು ಪ್ರಧಾನ ಕಾರ್ಯದರ್ಶಿ ವಳಗೆರೆ ಗಣೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net