

ಹೂವಿನಹಡಗಲಿ: ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳಾದರೂ ದಲಿತರಿಗೆ ಇದುವರೆಗೂ ಪೂರ್ಣ ಪ್ರಮಾಣದಲ್ಲಿ ಸ್ವಾತಂತ್ರ್ಯ ದೊರೆತಿಲ್ಲ ಎಂದು ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ ರಾಜ್ಯ ಕಾರ್ಯದರ್ಶಿ ಡಾ.ಕೆ.ಎಸ್.ಜನಾರ್ದನ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಖಿಲ ಭಾರತ ದಲಿತ ಆಂದೋಲನದಿಂದ ಆಯೋಜಿಸಿದ್ದ ತಾಲೂಕು ಪ್ರಥಮ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಈ ನಾಡಿನಲ್ಲಿ ಅನೇಕ ಮಹನೀರು, ಹೋರಾಟಗಾರರು, ಸಾಹಿತಿಗಳು ತಮ್ಮದೆ ಆದೆ ಛಾಪು ಮೂಡಿಸುವ ಮೂಲಕ ಸಮಸಮಾಜದ ಕಲ್ಪನೆಯನ್ನು ಕಟ್ಟಿಕೊಟ್ಟಿದ್ದಾರೆ. ಬಸವಾದಿ ಶರಣರು ಸಮಾಜಿಕನ್ಯಾಯಕ್ಕಾಗಿ ಶ್ರಮಿಸಿದ್ದರು ಎಂದರು.
ರಾಜ್ಯದಲ್ಲಿ 60 ಕ್ಕೂ ಹೆಚ್ಚು ದಲಿತ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದಲಿತರ ಮೇಲೆನ ದೌರ್ಜನ್ಯಗಳನ್ನು ತಡೆಗಟ್ಟುವಲ್ಲಿ ವಿಫಲವಾಗುತ್ತಿವೆ. ಜಾತಿಯ ವ್ಯಸನದಿಂದ ಮುಕ್ತರಾಗಿ ಎಲ್ಲರೂ ಒಂದಾಗಿ ಬದುಕಬೇಕು. ಶೋಷಿತರ ಏಳಿಗೆಗಾಗಿ ಅಂಬೇಡ್ಕರ್ ಅವರು ತಮ್ಮ ಸಂಪೂರ್ಣ ಜೀವನ ಮುಡಿಪಿಟ್ಟರು. ದಲಿತರು ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದರು.
ನಾಗತಿಬಸಾಪುರದ ಹಾಲಸ್ವಾಮಿಮಠದ ಡಾ.ಮಂಜುನಾಥ ಸ್ಚಾಮೀಜಿ, ಅಖಿಲಭಾರತ ಯುವ ಪೆಡರೇಷನ್ ರಾಜ್ಯಕಾರ್ಯದರ್ಶಿ ಎಚ್.ಎಂ.ಸಂತೋಷ, ಭಾರತೀಯ ಮಹಿಳಾ ಒಕ್ಕೂಟದ ರಾಜ್ಯಕಾರ್ಯದರ್ಶಿ ಎಚ್.ರೇಣುಕಮ್ಮ, ಅಖಿಲ ಭಾರತೀಯ ಕಿಸಾನ್ ಸಭಾ ಜಿಲ್ಲಾಧ್ಯಕ್ಷ ಗುಡಿಹಳ್ಳಿ ಹಾಲೇಶ್ ಮಾತನಾಡಿದರು.
ರಾಜ್ಯಸಂಚಾಲಕ ಹಲಗಿ ಸುರೇಶ ಅಧ್ಯಕ್ಷತೆ ವಹಿಸಿದ್ದರು. ವಕೀಲ ಎಚ್.ಪೂಜಪ್ಪ, ದಾಸಂಸ ಸಂಚಾಲಕ ಪಿ.ನಿಂಗಪ್ಪ, ಚನ್ನದಾಸರ ಸಮಾಜದ ತಾಲೂಕು ಅಧ್ಯಕ್ಷ ಅಂಜಿನಪ್ಪ ದಾಸರ, ಬಂಜಾರ ಸಮಾಜದ ತಾಲೂಕು ಅಧ್ಯಕ್ಷ ಶ್ರೀಧರ ನಾಯ್ಕ, ಭೋವಿ ಸಮಾಜದ ತಾಲೂಕು ಅಧ್ಯಕ್ಷ ಶ್ರೀನಿವಾಸ, ಅಕ್ಷರ ದಾಸೋಹದ ಜಿಲ್ಲಾಧ್ಯಕ್ಷೆ ಅನಸೂಯಮ್ಮ ಇತರರಿದ್ದರು.