ಮತ್ತೆ ನಡೆಯದ ಜಿ.ಪಂ. ಸಭೆ: ಅಧ್ಯಕ್ಷೆಗೆ ತೀವ್ರ ಮುಖಭಂಗ

ZP Meeting
Published on

ಚಿಕ್ಕಮಗಳೂರು: ಮತ್ತೆ ಸ್ವಪಕ್ಷದ ಸದಸ್ಯರು ಸೋಮವಾರದ ಜಿಪಂ ಸಭೆಗೆ ಸಾಮೂಹಿಕವಾಗಿ ಗೈರುಹಾಜರಾದ ಹಿನ್ನೆಲೆಯಲ್ಲಿ ಜಿಪಂ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಮತ್ತೆ ಮುಖಭಂಗ, ಮುಜುಗರ ಅನುಭವಿಸಿದ್ದು, ಅವರ ರಾಜೀನಾಮೆ ಬಿಕ್ಕಟ್ಟು ಇನ್ನಷ್ಟು ತಾರಕಕ್ಕೇರಿದೆ.

ಸತತ ಎರಡನೇ ಬಾರಿಗೆ ಕೋರಂ ಕೊರತೆ ಕಾರಣ ನೀಡಿ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ಅಧ್ಯಕ್ಷರು ಮುಂದೂಡಿದರು. ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಭೆಗೆ ಕಾಂಗ್ರೆಸ್ ಪಕ್ಷದ ಆರು ಮಂದಿ ಸದಸ್ಯರನ್ನು ಹೊರತುಪಡಿಸಿ ಉಪಾಧ್ಯಕ್ಷರ ಸಹಿತ ಎಲ್ಲ ಬಿಜೆಪಿ ಸದಸ್ಯರು ಸಭೆಯಿಂದ ದೂರ ಉಳಿದರು.

ಬೆಳಗ್ಗೆ 11 ಗಂಟೆಗೆ ನಿಗದಿಗೊಂಡ ಸಭೆಗೆ 11.15ಕ್ಕೆ ಆಗಮಿಸಿದ ಅಧ್ಯಕ್ಷರು ಕೋರಂ ಕೊರತೆಯ ಕಾರಣಕ್ಕೆ 11.25ರ ವೇಳೆಗೆ ಸಭೆಯನ್ನು ಅರ್ಧಗಂಟೆ ಮುಂದೂಡಿರುವುದಾಗಿ ತಿಳಿಸಿದರು. ಪುನಃ 11.55ಕ್ಕೆ ‌ಸಭೆ ಸೇರಿದಾಗ ಸಹ ಆಡಳಿತಾರೂಢ ಬಿಜೆಪಿಯ ಸದಸ್ಯರು ಯಾರೂ ಬರಲಿಲ್ಲ. ಅಧ್ಯಕ್ಷರ ನಿರೀಕ್ಷೆ ಸಂಪೂರ್ಣ ಹುಸಿಯಾಗಿ ನಿರಾಸೆ ಅನುಭವಿಸಬೇಕಾಯಿತು.

ಇನ್ನೇನು ಮುಂದಿನ ದಿನಾಂಕಕ್ಕೆ ಸಭೆ ಮುಂದೂಡಬೇಕೆನ್ನುವ ಹಂತದಲ್ಲಿರುವಾಗಲೇ ಕಾಂಗ್ರೆಸ್ ಪಕ್ಷದ ಕೆ.ಆರ್ .ಪ್ರಭಾಕರ್ ಮತ್ತು ಶರತ್ ಕೃಷ್ಣಮೂರ್ತಿ ಮಾತನಾಡಿ, ಇದೀಗ ಎರಡನೇ ಸಲದ ಸಭೆಗೂ ಕೋರಂ ಇಲ್ಲದಾಗಿದೆ. ಸಭೆಗೆ ಇನ್ನೂ ಕೆಲವು ಸದಸ್ಯರು ಬರುವ ನಿರೀಕ್ಷೆ ಇದೆ. ಈಗಾಗಲೇ ದೂರವಾಣಿ ಮೂಲಕ ತಿಳಿಸಿದ್ದಾರೆ. ಮತ್ತೆ ಅರ್ಧಗಂಟೆ ಕಾಲಾವಕಾಶ ನೀಡಿ ಮತ್ತೊಮ್ಮೆ ಸಭೆ ಮುಂದೂಡುವಂತೆ ಕೋರಿದರು. 20 ನಿಮಿಷದ ಬಳಿಕ ಸಭೆ ಆರಂಭಿಸುವ ಕುರಿತು ಅಧ್ಯಕ್ಷರು ತಿಳಿಸಿದಾಗ ಅರ್ಧಗಂಟೆ ಮುಂದೂಡಲು ವಿನಂತಿಸಿಕೊಂಡ ಮೇರೆಗೆ ಅಧ್ಯಕ್ಷರು ಒಪ್ಪಿಗೆ ಸೂಚಿಸಿದರು.

ಮತ್ತೆ 12.40ಕ್ಕೆ ಸೇರಿದಾಗಲೂ ಕೋರಂ ಕೊರತೆ ಕಾಡಿದ್ದರಿಂದ ನಿರ್ವಾಹವಿಲ್ಲದೆ ಅಧ್ಯಕ್ಷರು ಮುಂದಿನ ಸಭೆಯ ದಿನಾಂಕವನ್ನು ಸದ್ಯದಲ್ಲೇ ತಿಳಿಸುವುದಾಗಿ ಹೇಳಿದರು. ಈ ಹಂತದಲ್ಲಿ ಕಾಂಗ್ರೆಸ್ ಸದಸ್ಯರು ಮಾತನಾಡಲು ಆರಂಭಿಸಿದರಾದರೂ ಅವಕಾಶ ನೀಡದ ಅಧ್ಯಕ್ಷರು, ಸಭೆ ಮುಂದೂಡಿದ್ದು, ಚರ್ಚೆಗೆ ಅವಕಾಶವಿಲ್ಲ ಎಂದು ಹೇಳಿ ನಿರ್ಗಮಿಸಿದರು.

ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆಬಿಜೆಪಿಯಿಂದ ಆಯ್ಕೆಯಾದ ಸದಸ್ಯರಲ್ಲಿ ಇಬ್ಬರು ಮಾತ್ರ ಅರ್ಹರಿದ್ದು, ತಲಾ 20 ತಿಂಗಳ ಅವಧಿ ಹಂಚಿಕೆಯಾಗಿ ಒಡಂಬಡಿಕೆಯಾಗಿತ್ತು. ಅದರಂತೆ ಪಕ್ಷದ ಸೂಚನೆಯಂತೆ ಇದೀಗ ಸುಜಾತ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆನ್ನುವುದು ಪಕ್ಷದ ವಾದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net