

ಚಿಟಗುಪ್ಪ: ವಿಧಾನಸಭೆ ಚುನಾವಣೆಗೆ ಮುನ್ನ ಘೋಷಿಸಿದಂತೆ ಐದು ಗ್ಯಾರಂಟಿ ಯೋಜನೆಗಳ ಸೌಲಭ್ಯಗಳನ್ನು ಜನರ ಮನೆ-ಮನೆಗೆ ತಲುಪಿಸಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ರಘೋಜಿ ಫಂಕ್ಷನ್ ಹಾಲ್‌ನಲ್ಲಿ ಜಿಲ್ಲಾಡಳಿತ ಸೋಮವಾರ ಆಯೋಜಿಸಿದ್ದ ಜನಸ್ಪಂದನ ಸಭೆ ಮತ್ತು ಐದು ಗ್ಯಾರಂಟಿಗಳ ಸಮಾವೇಶ ಉದ್ಘಾಟಿಸಿದ ಅವರು, ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ೩.೨೦ ಲಕ್ಷ ಮಹಿಳೆಯರು, ಗೃಹಜ್ಯೋತಿಯಡಿ ೩.೫೦ ಲಕ್ಷ ಜನರು ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ ಎಂದರು.
ಅನ್ನಭಾಗ್ಯದಡಿ ೩.೧೦ ಲಕ್ಷ, ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ೧೧.೪೦ ಲಕ್ಷ ಫಲಾನುಭವಿಗಳಿಗೆ ಪ್ರತಿ ತಿಂಗಳು ೧೮.೫೫ ಕೋಟಿ ರೂ. ಡಿಬಿಟಿ ಮುಖಾಂತರ ಪಾವತಿಸಲಾಗಿದೆ. ಶಕ್ತಿ ಯೋಜನೆಯಡಿ ಇದುವರೆಗೆ ಜಿಲ್ಲೆಯಲ್ಲಿ ೩ ಕೋಟಿ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಿದ್ದಾರೆ. ೨೦೦೦ ವಿದ್ಯಾರ್ಥಿಗಳು ಯುವನಿಧಿ ಲಾಭ ಪಡೆಯುತ್ತಿದ್ದಾರೆ. ನಮ್ಮ ಸರ್ಕಾರ ಜನರ ವಿಶ್ವಾಸಕ್ಕೆ ಯಾವತ್ತೂ ದ್ರೋಹ ಬಗೆದಿಲ್ಲ. ಬಡವರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರ ಏಳಿಗೆಗೆ ಸದಾ ಬದ್ಧವಾಗಿದೆ ಎಂದು ತಿಳಿಸಿದರು.
ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್ ಮಾತನಾಡಿ, ಬಡವರು, ವೃದ್ಧರು, ಹಿಂದುಳಿದವರಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದು ಮನೆ ಬಾಗಿಲಿಗೆ ತಲುಪಿಸುವಂತಹ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಮಾತನಾಡಿ, ಗ್ಯಾರಂಟಿ ಸಮಾವೇಶ ಮೂಲಕ ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳದಲ್ಲಿ ಬಗೆಹರಿಸಲಾಗುತ್ತಿದೆ. ಇದರ ಲಾಭವನ್ನು ಜನರು ಪಡೆಯಬೇಕೆಂದು ಕೋರಿದರು.
ಜಿಲ್ಲಾಧಿಕಾರಿ ಗೋವಿಂದರಡ್ಡಿ ಪ್ರಾಸ್ತಾವಿಕ ಮಾತನಾಡಿದರು. ಜಿಪಂ ಸಿಇಒ ಡಾ.ಗಿರೀಶ್ ಬದೋಲೆ, ಎಸ್‌ಪಿ ಚನ್ನಬಸವಣ್ಣ ಲಂಗೋಟಿ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ.ಎಂ., ಎಸಿ ಪ್ರಕಾಶ ಕುದರೆ, ತಹಸೀಲ್ದಾರ್ ರವೀಂದ್ರ ದಾಮಾ, ಪುರಸಭೆ ಮುಖ್ಯಾಧಿಕಾರಿ ಹುಸಾಮೋದ್ದಿನ್ ಬಾಬಾ, ಡಿವೈಎಸ್‌ಪಿ ಜೆ.ಎಸ್. ನ್ಯಾಮೇಗೌಡ, ಸಿಪಿಐ ಶ್ರೀನಿವಾಸ ಅಲ್ಲಾಪುರ ಇತರರಿದ್ದರು.
ಕೂಡಲೇ ಸಮಸ್ಯೆ ಬಗೆಹರಿಸಿ: ವಿದ್ಯುತ್ ಸಂಪರ್ಕ, ಪಡಿತರ ಕಾರ್ಡ್ ತಿದ್ದುಪಡಿ, ಮನೆ, ಭೂಮಿ ಮಂಜೂರಿ, ರಸ್ತೆ ಒತ್ತುವರಿಯಂಥ ಅನೇಕ ಸಮಸ್ಯೆಗಳ ಅಹವಾಲುಗಳನ್ನು ಸಚಿವ ಈಶ್ವರ ಖಂಡ್ರೆ ಸ್ವೀಕರಿಸಿ ಕೂಡಲೇ ಬಗೆಹರಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ಯಾರಂಟಿ ಯೋಜನೆಗಳಿಂದ ಬಡವರ ಆರ್ಥಿಕ ಮಟ್ಟ ಹೆಚ್ಚಾಗುತ್ತಿದೆ. ಭ್ರಷ್ಟಾಚಾರರಹಿತ ನೇರವಾಗಿ ಫಲಾನುಭವಿಗಳಿಗೆ ತಲುಪಿಸುವುದರ ಮೂಲಕ ಗ್ಯಾರಂಟಿ ಸಮಾವೇಶ ಆಯೋಜಿಸಿದ್ದು ಸಾರ್ಥಕ ಎನಿಸಿದೆ.
| ಈಶ್ವರ ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ